ADVERTISEMENT

ವಾಡಿ | ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗುವ ದನಗಳು: ಸಂಚಾರ ಕಿರಿಕಿರಿ

ಪ್ರಜಾವಾಣಿ ವಿಶೇಷ
Published 17 ಜುಲೈ 2024, 5:58 IST
Last Updated 17 ಜುಲೈ 2024, 5:58 IST
<div class="paragraphs"><p>ವಾಡಿ ಸಮೀಪದ ನಾಲವಾರ ಕುಂಬಾರಳ್ಳಿ ಗ್ರಾಮದಲ್ಲಿ ದನಗಳು ರಸ್ತೆ ಮೇಲೆ ನಿಂತಿರುವುದು.</p></div>

ವಾಡಿ ಸಮೀಪದ ನಾಲವಾರ ಕುಂಬಾರಳ್ಳಿ ಗ್ರಾಮದಲ್ಲಿ ದನಗಳು ರಸ್ತೆ ಮೇಲೆ ನಿಂತಿರುವುದು.

   

ವಾಡಿ: ‘ನಾಲವಾರ–ಕುಂಬಾರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಚಾಲಕರು ಹಾಗೂ ಸುಗಮ ಸಂಚಾಕರಕ್ಕೆ ಅಡಚಣೆಯಾಗಿದೆ.

ಹೆದ್ದಾರಿ ಮೇಲೆ ದನಗಳ ಹಾವಳಿ ತೀವ್ರಗೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ರಸ್ತೆಯಲ್ಲಿ ಗುಂಪುಗುಂಪಾಗಿ ದನಗಳು ನಿಲ್ಲುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಲಬುರಗಿ ಗುತ್ತಿ ನಡುವಣ ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡಿರುವ ನಾಲವಾರ ಕುಂಬಾರಹಳ್ಳಿ ಗ್ರಾಮಕ್ಕೆ ಡಿವೈಡರ್ ರಸ್ತೆಯಿದೆ. ಆದರೆ ಡಿವೈಡರ್ ಮೇಲೆ ಹಾಗೂ ರಸ್ತೆ ಮೇಲೆಯೇ ದನಗಳು ಗುಂಪು ಗುಂಪಾಗಿ ನಿಲ್ಲುತ್ತಿದ್ದು ತಾಪತ್ರಯ ಉಂಟು ಮಾಡುತ್ತಿವೆ.

ADVERTISEMENT

ಹಸುಗಳನ್ನು ಸಾಕಣೆ ಮಾಡಿರುವ ಮಾಲೀಕರು ತಮ್ಮ ಜಾನುವಾರುಗಳನ್ನು ಬೇಕಾಬಿಟ್ಟಿಯಾಗಿ ಹೊರಗೆ ಬಿಟ್ಟಿರುವ ಕಾರಣ ಅವು ಮುಖ್ಯರಸ್ತೆಯಲ್ಲಿ ಜನರಿಗೆ ತೊಂದರೆ ನೀಡುತ್ತಿವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಹಾಗೂ ರಾತ್ರಿ ವೇಳೆ ರಸ್ತೆಯಲ್ಲೇ ಬೀಡು ಬಿಟ್ಟಿರುತ್ತವೆ. ದನಗಳಿಗೆ ಹಗ್ಗ, ಮೂಗುದಾರ ಏನೂ ಇರುವುದಿಲ್ಲ. ಹೊಲಗಳಲ್ಲಿ ಮೇಯುವ ದನಗಳು ನಂತರ ದಣಿವಾರಿಸಿಕೊಳ್ಳಲು ರಸ್ತೆಯಲ್ಲೇ ಮಲಗುತ್ತವೆ. ವಾಹನಗಳ ಶಬ್ದಕ್ಕೂ ಅವು ಬೆದರುವುದಿಲ್ಲ. ನಿಂತಲ್ಲೇ ನಿಲ್ಲುತ್ತವೆ. ಮಲಗಿದ್ದಲ್ಲೇ ಮಲಗುತ್ತವೆ. ವಾಹನ ಸವಾರರೇ ಅವುಗಳನ್ನು ಸರಿಸಿ ಮುಂದೆ ತೆರಳಬೇಕಾಗಿದೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಕಣ್ಣು ಕೊರೈಸುವ ಲೈಟ್ ಹಾಕಿಕೊಂಡು ವಾಹನಗಳು ಬರುವುದರಿಂದ ರಸ್ತೆ ಮೇಲಿನ ದನಗಳು ಕಾಣದೆ ಅಪಘಾತಗಳು ಜರುಗುತ್ತಿವೆ. ಈಚೆಗೆ ಲಾಡ್ಲಾಪುರ ಹತ್ತಿರ ಹೆದ್ದಾರಿ ಮೇಲೆ 5 ಎಮ್ಮೆಗಳು ಸತ್ತು ಬಿದ್ದಿದ್ದವು.

ಸದಾ ಜನರಿಂದ ತುಂಬಿರುವ ಕುಂಬಾರಹಳ್ಳಿ ಗ್ರಾಮದಲ್ಲಿ ಹೋಟೆಲ್ ಅಂಗಡಿಗಳು, ಮಾಂಸದ ಅಂಗಡಿಗಳು ಹೆಚ್ಚು ಇವೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಬಿಸಾಡುವ ಹಣ್ಣು, ತರಕಾರಿ, ಸೊಪ್ಪು ತಿನ್ನಲು ಅಪಾರ ಸಂಖ್ಯೆಯ ದನಗಳು ಅಲ್ಲಿಗೆ ಬರುತ್ತವೆ.

ಈಚೆಗೆ ಶಹಾಬಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಬೀಡಾಡಿ ಹಾಗೂ ಸಾಕು ದನಗಳ ಹಾವಳಿ ಬಗ್ಗೆ ಖಡಕ್ ಸೂಚನೆ ನೀಡಿ ಬೀದಿಬದಿಯಲ್ಲಿ ದನಗಳು ಬಿಟ್ಟು ವಾಹನ ಸಂಚಾರಕ್ಕೆ ತಡೆವುಂಟು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.

ಹೆದ್ದಾರಿ ಮೇಲೆ ದನಗಳು ನಿಲ್ಲುತ್ತಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈಚೆಗೆ ಇಲ್ಲಿಯೇ 3 ದನಗಳು ಅಪಘಾತದಿಂದ ಮೃತಪಟ್ಟಿವೆ. ದನಗಳ ಹಾವಳಿಗೆ ಕಡಿವಾಣ ಹಾಕಬೇಕು.
-ಚಂದ್ರಾಮ ಅಣಬಿ, ಕುಂಬಾರಹಳ್ಳಿ
ವಾಡಿ ಸಮೀಪದ ನಾಲವಾರ ಕುಂಬಾರಳ್ಳಿ ಗ್ರಾಮದಲ್ಲಿ ದನಗಳು ರಸ್ತೆ ಮೇಲೆ ನಿಂತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.