ADVERTISEMENT

ಒಳಮೀಸಲಾತಿ ಸಂಪೂರ್ಣ ಜಾರಿಗೆ ಆಗ್ರಹ

ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:22 IST
Last Updated 24 ಫೆಬ್ರುವರಿ 2026, 7:22 IST
ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕಚೇರಿತನಕ ಸೋಮವಾರ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು                ಪ್ರಜಾವಾಣಿ ಚಿತ್ರ
ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕಚೇರಿತನಕ ಸೋಮವಾರ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು                ಪ್ರಜಾವಾಣಿ ಚಿತ್ರ    

ಕಲಬುರಗಿ: ‍‘ಮುಂಬರುವ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶೇ 6:6:5 ಅನುಪಾತದಂತೆ ಸಂಪೂರ್ಣವಾಗಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು, ತಮಟೆ ಬಾರಿಸುತ್ತ, ಘೋಷಣೆ ಕೂಗುತ್ತ ಜಿಲ್ಲಾಡಳಿತ ಭವನ ಆವರಣದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಮಾದಿಗರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಸಂಪೂರ್ಣ ಒಳಮೀಸಲಾತಿ ಜಾರಿಗೆ ಮಾಡಲೇಬೇಕು’, ‘ಮತ ನಮ್ಮದು ಅಧಿಕಾರ ನಿಮ್ಮದು–ನಡೆಯಲ್ಲ’, ‘ಜೈ ಮಾದಿಗ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ, ‘ರಾಜ್ಯ ಸರ್ಕಾರ ಈಗಾಗಲೇ ಒಳಮೀಸಲಾತಿ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲೂ 6:6:5 ಮೀಸಲಾತಿಯನ್ನು ಅಂಗೀಕರಿಸಲಾಗಿದೆ. ಆದರೆ, ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ಮರಳಿ ಕಳುಹಿಸಿದ್ದಾರೆ. ಸಚಿವರು ಸೇರಿದಂತೆ ಸರ್ಕಾರವು ಮಸೂದೆಗೆ ರಾಜ್ಯಪಾಲರ ಅಂಕಿತ ಪಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು’ ಎಂದು ಆಗ್ರಹಿಸಿದರು.

‘ಈ ನಡುವೆ, ವಿವಿಧ ಇಲಾಖೆಗಳು ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿವೆ. ಆದರೂ, ಸರ್ಕಾರ ಮೀಸಲಾತಿ ಬಿಂದು ಅಳವಡಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹಾದೇವಪ್ಪ ಅವರು ರಾಜ್ಯದ ಮಾದಿಗರ ಸಂಕಷ್ಟ ಅರ್ಥೈಸಿಕೊಳ್ಳಬೇಕು. ಒಳಮೀಸಲಾತಿ ‘ಎ’ ಬಿಂದುವಿನಲ್ಲಿ ಕೊಟ್ಟಿರುವ ಶೇ 6ರಷ್ಟು ಮೀಸಲಾತಿ ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ಮುಖಂಡ ರಾಜು ವಾಡೇಕರ ಮಾತನಾಡಿ, ‘ನಮ್ಮ ಒಳಮೀಸಲಾತಿ ಹೋರಾಟ 35 ವರ್ಷಗಳ ಇತಿಹಾಸ ಹೊಂದಿದೆ. ನ್ಯಾ.ನಾಗಮೋಹನದಾಸ ಆಯೋಗ ಸೇರಿದಂತೆ ಹಲವು ವರದಿಗಳು ಮಾದಿಗರ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ತೋರಿಸಿವೆ. ನಮ್ಮ ಸಂಖ್ಯಾಬಲಕ್ಕೆ ತಕ್ಕಂತೆ ಮುಂಬರುವ ಬಜೆಟ್‌ನಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

11 ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ಒಳಮೀಸಲಾತಿ ಜಾರಿಯಾಗಲೇ ಬೇಕು ಎಂಬುದು ಸೇರಿದಂತೆ 11 ವಿವಿಧ ಬೇಡಿಕೆಗಳ ಈಡೇರಿಕೆಗೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಶ್ಯಾಮ ನಾಟೀಕರ, ಪರಮೇಶ್ವರ ಖಾನಾಪುರ, ದಶರಥ ಕಲಗುರ್ತಿ, ಗೋಪಿಕೃಷ್ಣ ಗುಡೇನವರ, ಮಲ್ಲಿಕಾರ್ಜುನ ಜಿನಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.