ADVERTISEMENT

‘ಯೋಗ ಬದುಕಿನ ಅಂಗವಾಗಲಿ’

ವಿವಿಧೆಡೆ ವಿಶ್ವ ಯೋಗ ದಿನಾಚರಣೆ, ವಿವಿಧ ಆಸನಗಳ ಪ್ರಾತ್ಯಕ್ಷಿಕೆ ನೀಡಿದ ತಜ್ಞರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 9:23 IST
Last Updated 22 ಜೂನ್ 2020, 9:23 IST
ಕಲಬುರ್ಗಿಯ ಆರ್ಟ್ ಆಫ್‌ ಲಿವಿಂಗ್‌ ಜ್ಞಾನಕ್ಷೇತ್ರದಲ್ಲಿ ಭಾನುವಾರ ಸದಸ್ಯರು ವಿವಿಧ ಆಸನಗಳನ್ನು ನೆರವೇರಿಸಿದರು.
ಕಲಬುರ್ಗಿಯ ಆರ್ಟ್ ಆಫ್‌ ಲಿವಿಂಗ್‌ ಜ್ಞಾನಕ್ಷೇತ್ರದಲ್ಲಿ ಭಾನುವಾರ ಸದಸ್ಯರು ವಿವಿಧ ಆಸನಗಳನ್ನು ನೆರವೇರಿಸಿದರು.   

ಕಲಬುರ್ಗಿ: ‘ಶಾರೀರಿಕ ಸ್ವಾಸ್ಥ್ಯದ ದೃಷ್ಟಿಯಿಂದ ಪತಂಜಲಿ ಆಸನ ಹಾಗೂ ಪ್ರಾಣಾಯಾಮ ಲಾಭಕಾರಿಯಾಗಿವೆ. ಇಂದು ವಿಶ್ವದ ಎಲ್ಲ ಕಡೆ ಇದರ ಪ್ರಯೋಗವಾಗುತ್ತಿದೆ. ಬ್ರಹ್ಮಾಕುಮಾರಿ ಸೋದರಿಯರು ಇಂಥ ಆಸನಗಳನ್ನು ವಿಶ್ವದ ಬೇರೆಬೇರೆ ಕಡೆ ಪರಿಚಯಿಸುತ್ತಿರುವುದು ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ ಹೇಳಿದರು.

ಇಲ್ಲಿನ ಆದರ್ಶನಗರದ ಬ್ರಹ್ಮಾಕುಮಾರಿಸ್‍ನ ರಾಜಯೋಗ ಕೇಂದ್ರದಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ಯೋಗದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಭಾರತ ಹಾಗೂ ವಿಶ್ವದಲ್ಲಿ ಮಾನಸಿಕ ಒತ್ತಡದ ಘಟನೆಗಳು ಹೆಚ್ಚಾಗುತ್ತಿವೆ. ಅದರ ನಿರ್ವಹಣೆಯಲ್ಲಿ ರಾಜಯೋಗ ಮಹತ್ತರ ಪಾತ್ರ ವಹಿಸಬಹುದು’ ಎಂದರು.

ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಸದಸ್ಯ, ನ್ಯಾಯಮೂರ್ತಿ ಆರ್.ಬಿ.ಸತ್ಯನಾರಾಯಣ ಸಿಂಗ ಮಾತನಾಡಿದರು.

ADVERTISEMENT

ಬ್ರಹ್ಮಾಕುಮಾರಿ ವಲಯ ಮುಖ್ಯಸ್ಥರಾದ ವಿಜಯಾ ದೀದಿ ಅವರು ಪತಂಜಲಿ ಯೋಗ ಪದ್ಧತಿಯಲ್ಲಿರುವ ಧ್ಯಾನ ಧಾರಣಾ ಹಾಗೂ ಸಮಾಧಿಯ ಬಗ್ಗೆ ವಿವರಿಸಿದರು. ಬಿಕೆ ಪ್ರೇಮಣ್ಣ ಅಧ್ಯಕ್ಷತೆ ವಹಿಸಿದ್ದರು. ಶಿವಲೀಲಾ ಅಕ್ಕ ನಿರೂಪಿಸಿದರು. ಬೆಂಗಳೂರಿನ ದಿನೇಶಕುಮಾರ ಆಸನ ಪ್ರಾಣಾಯಾಮದ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಜಿಲ್ಲಾ ಪತ್ರಿಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ ವಂದಿಸಿದರು.

ಸಿಯುಕೆನಲ್ಲಿ ಯೋಗ ದಿನ

‘ಯೋಗವು ಜೀವನದ ಒಂದು ವಿಧಾನವಾಗಬೇಕು. ಅದನ್ನು ಒಂದು ದಿನಕ್ಕೆ ನಿರ್ಭಂಧಿಸದೆ ನಿತ್ಯ ಅರ್ಧ ಘಂಟೆ ಯೋಗವನ್ನು ಅಭ್ಯಾಸ ಮಾಡುವುದರಿಂದ ನಮ್ಮ ದೇಹವನ್ನು ಚೈತನ್ಯಗೊಳಿಸಬಹುದು. ಯೋಗವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆಂತರಿಕ ಮತ್ತು ಬಾಹ್ಯ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ’ ಎಂದು ಹಿಂಗುಲಾಂಬಿಕಾ ಆಯುರ್ವೇದ ಕಾಲೇಜಿನ ಡಾ.ನಿರ್ಮಲಾ ಕೆಳಮನಿ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ‘ಕೋವಿಡ್‌ ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿ ಯೋಗದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಯೋಗವು ಪುರಾತನ ಅಭ್ಯಾಸವಾಗಿರುವುದರಿಂದ ಪ್ರಪಂಚದಾದ್ಯಂತ ಜನರು ತಮ್ಮ ಒತ್ತಡದ ಜೀವನ ಶೈಲಿ ಮತ್ತು ಅದರ ಪರಿಣಾಮಗಳಿಂದ ಹೊರಬರಲು ಸಹಾಯ ಮಾಡುತ್ತಿದೆ’ ಎಂದರು.

ವಶಿಷ್ಠ ಯೋಗ ಕೇಂದ್ರ ಕಲಬುರ್ಗಿಯ ಸಿದ್ಧಯ್ಯ ಗುತ್ತೇದಾರ್ ಮತ್ತು ಶಶಿಕಲಾ ಗುತ್ತೇದಾರ್ ಅವರು ಯೋಗ ಪ್ರದರ್ಶನ ನೀಡಿದರು. ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಮಾತನಾಡಿದರು. ಕುಲಸಚಿವ ಪ್ರೊ.ಮುಸ್ತಾಕ್ ಅಹಮದ್ ಪಟೇಲ್, ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ.ಬಿ.ಆರ್. ಕೆರೂರ, ಹಣಕಾಸು ಅಧಿಕಾರಿ ಶಿವಾನಂದನ್‌, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಚನ್ನವೀರ ಆರ್.ಎಂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಡಾ. ಮಹೇಂದ್ರ ನಿರೂಪಿಸಿದರು.

ಗುಲಬರ್ಗಾ ವಿ.ವಿ

ವಿಶ್ವ ಯೋಗ ದಿನಾಚರಣೆ ಗುಲಬರ್ಗಾ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್‌ ಕ್ರೀಡಾಂಗಣದಲ್ಲಿ ನಡೆಯಿತು.

ಪ್ರಭಾರ ಕುಲಪತಿ ಚಂದ್ರಕಾಂತ ಯಾತನೂರ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ.ಸಂಜೀವಕುಮಾರ ಪಿ., ವಿತ್ತಾಧಿಕಾರಿ ಪ್ರೊ.ಬಿ.ವಿಜಯ ಡಾ.ದೇವಿದಾಸ ಮಾಲೆ, ದೈಹಿಕ ಶಿಕ್ಷಣ ಭಾಗದ ನಿರ್ದೇಶಕ ಡಾ.ಎಸ್.ಎಂ. ಪಾಸೋಡಿ, ದೈಹಿಕ ಶಿಕ್ಷಣ ಭಾಗದ ಸಂಯೋಜಕ ಡಾ.ಹಣಮಂತ್ ಜಂಗೆ, ಪ್ರಾಚಾರ್ಯರಾದ ಎನ್.ಕಣ್ಣೂರ, ಪ್ರೊ.ಬಸವರಾಜ ಸಣ್ಣಕ್ಕಿ, ಎನ್ನೆಸ್ಸೆಸ್‌ ಸಂಯೋಜಕರಾದ ಪ್ರೊ.ರಮೇಶ ಲಂಡನಕರ, ದೇವೇಂದ್ರಪ್ಪ ತೇಲ್ಕರ್, ಯೋಗ ಉಪನ್ಯಾಸಕ ಚಂದ್ರಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.