ADVERTISEMENT

ಎಚ್‌ಡಿಕೆ ಟೀಕಿಸಲು ಕಾಂಗ್ರೆಸ್ಸಿಗರಿಗೆ ನೈತಿಕತೆ ಇಲ್ಲ: ನಾಸಿರ್ ಹುಸೇನ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 3:32 IST
Last Updated 19 ಅಕ್ಟೋಬರ್ 2021, 3:32 IST
ನಾಸಿರ್ ಹುಸೇನ್ ಉಸ್ತಾದ್
ನಾಸಿರ್ ಹುಸೇನ್ ಉಸ್ತಾದ್   

ಕಲಬುರಗಿ: ‘ಅಲ್ಪಸಂಖ್ಯಾತರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಯಾವ ಸಹಾಯವನ್ನೂ ಮಾಡಿಲ್ಲ ಎಂದು ಟೀಕಿಸಲು ಸಿದ್ದರಾಮಯ್ಯ ಅವರ ಬೆಂಬಲಿಗ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅನ್ಸಾರಿ, ಜಮೀರ್ ಅಹ್ಮದ್ ಅವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಜೆಡಿಎಸ್‌ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮೀರ್‌ ಅಹ್ಮದ್ ಅವರು ಕುಮಾರಸ್ವಾಮಿ ಅವರನ್ನು ಡೀಲ್ ಮಾಸ್ಟರ್ ಎಂದು ಟೀಕಿಸಿದ್ದಾರೆ. ಜಮೀರ್‌ ಅಹ್ಮದ್ ಅವರೇ ದೊಡ್ಡ ಡೀಲ್ ಮಾಸ್ಟರ್ ಆಗಿದ್ದಾರೆ. ಕುಮಾರಸ್ವಾಮಿ ಅವರಿಂದ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಅನ್ಯಾಯವಾಗುತ್ತಿದ್ದರೆ ಅವರೇಕೆ ಆಗಲೇ ಜೆಡಿಎಸ್‌ ಬಿಟ್ಟು ಬರಲಿಲ್ಲ’ ಎಂದು ಪ್ರಶ್ನಿಸಿದರು.

‘ಇಕ್ಬಾಲ್ ಅನ್ಸಾರಿ ಅವರು ಶಾಸಕರಾಗಿದ್ದೇ ಜೆಡಿಎಸ್‌ ಪಕ್ಷದಿಂದ. ಜಮೀರ್‌ ಅಹ್ಮದ್‌ ಅವರೂ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಈಗ ಯಾವ ಮುಖ ಹೊತ್ತು ಕುಮಾರಸ್ವಾಮಿ ಅವರನ್ನು ಟೀಕಿಸುತ್ತಾರೆ’ ಎಂದು ಹರಿಹಾಯ್ದರು.

ADVERTISEMENT

‘ಶೇ 18ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್‌ ಇಲ್ಲಿಯವರೆಗೆ ರಾಜ್ಯದ ಮುಖ್ಯಮಂತ್ರಿ ಮಾಡಿಲ್ಲ. ಉಪ ಮುಖ್ಯಮಂತ್ರಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ಮಾಡಿಲ್ಲ. ಕಾಂಗ್ರೆಸ್‌ನಿಂದ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಒಬ್ಬರೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ. ಇದೇನಾ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿ. ಈ ಬಗ್ಗೆ ಜಮೀರ್ ಅಹ್ಮದ್, ಇಕ್ಬಾಲ್ ಅನ್ಸಾರಿ ಅವರಿಗೆ ತಮ್ಮ ನಾಯಕರನ್ನು ಪ್ರಶ್ನಿಸಬೇಕು ಎಂದು ಅನಿಸುತ್ತಿಲ್ಲವೇ’ ಎಂದರು.

‘ಜೆಡಿಎಸ್‌ನೊಂದಿಗೆ ಮೈತ್ರಿಗೆ ಕಾಂಗ್ರೆಸ್ ತಯಾರಿಲ್ಲ’

‘ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಅವರಿಗೆ ಕೋಮು ಶಕ್ತಿಗಳನ್ನು ಹೊರಗೆ ಇಡುವುದರಲ್ಲಿ ಆಸಕ್ತಿ ಇಲ್ಲ. ಬದಲಾಗಿ ಜೆಡಿಎಸ್–ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದರೆ ಅದನ್ನೇ ಕಾಂಗ್ರೆಸ್‌ ನಮ್ಮ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡಲಿದೆ’ ಎಂದು ನಾಸಿರ್ ಹುಸೇನ್ ಉಸ್ತಾದ್ ಟೀಕಿಸಿದರು.

‘ನಾವು ಪಾಲಿಕೆಯಲ್ಲಿ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದೇವೆ. ಆ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿಳಿಸಿದ್ದೇವೆ. ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ನಾವು ತಯಾರಿದ್ದೇವೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಮ್ಮ ಪಕ್ಷದ ವರಿಷ್ಠರೊಂದಿಗೆ ಈ ಬಗ್ಗೆ ಮಾತುಕತೆ ಮಾಡಬೇಕಿತ್ತು. ಇಲ್ಲಿಯವರೆಗೂ ಮಾತುಕತೆ ನಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.