ಕಲಬುರಗಿ: ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯಲ್ಲಿ ಸುರಿದ ಮಳೆ–ಬೀಸಿದ ಗಾಳಿಗೆ ಬಹುತೇಕ ಮೂರುವರೆ ತಿಂಗಳಲ್ಲಿ ಜೆಸ್ಕಾಂಗೆ ಬರೋಬ್ಬರಿ ₹ 17.01 ಕೋಟಿ ಹಾನಿಯಾಗಿದೆ.
ಏಪ್ರಿಲ್ 1ರಿಂದ ಜುಲೈ 18ರ ತನಕದ ಅವಧಿಯಲ್ಲಿ ಜೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಗಾಳಿ, ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 7,712 ವಿದ್ಯುತ್ ಕಂಬಗಳು ಹಾನಿಯಾಗಿದೆ. 512 ವಿದ್ಯುತ್ ಪರಿವರ್ತಕಗಳು (ಟಿ.ಸಿ) ಹಾಗೂ 65.73 ಕಿ.ಮೀಗಳಷ್ಟು ಉದ್ದದ ವಿದ್ಯುತ್ ತಂತಿಗೆ ಹಾನಿಯಾಗಿದೆ.
ಈ ಪೈಕಿ ಜೆಸ್ಕಾಂ ಅಧಿಕಾರಿಗಳು 7,701 ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲಾಗಿದ್ದು, ಇನ್ನುಳಿದ 11 ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದುರಸ್ತಿಗೆ ಕಾದಿದ್ದ ಎಲ್ಲ 512 ಟಿ.ಸಿಗಳನ್ನು ಬದಲಾಯಿಸಲಾಗಿದೆ. ಅದೇ ರೀತಿ ಹಾನಿಯಾಗಿದ್ದ 65.73 ಕಿ.ಮೀ. ಉದ್ದದ ವಿದ್ಯುತ್ ತಂತಿಯನ್ನೂ ದುರಸ್ತಿ ಮಾಡಲಾಗಿದೆ.
ಕಲಬುರಗಿಯಲ್ಲೇ ಹೆಚ್ಚು: ಜೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಪೈಕಿ ಕಲಬುರಗಿಯಲ್ಲೇ ಹೆಚ್ಚಿನ ಹಾನಿ ಸಂಭವಿಸಿದೆ. 2,126 ಕಂಬಗಳು ಹಾಗೂ 117 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ರಾಯಚೂರಿನಲ್ಲಿ 1,583 ಕಂಬಗಳು ಹಾಗೂ 15 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ.
ಯಾದಗಿರಿಯಲ್ಲಿ 1,436 ಕಂಬ ಹಾಗೂ 45 ಟಿ.ಸಿಗಳಿಗೆ ತೊಂದರೆಯಾಗಿದೆ. ಕೊಪ್ಪಳದಲ್ಲಿ 695 ವಿದ್ಯುತ್ ಕಂಬಗಳು ಹಾಗೂ 56 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ 517 ಕಂಬಗಳು ಹಾಗೂ 94 ಟಿ.ಸಿಗಳಿಗೆ ತೊಂದರೆಯಾಗಿದೆ. ಬಳ್ಳಾರಿಯಲ್ಲಿ 165 ಕಂಬಗಳು ಹಾಗೂ 35 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ.
ತಂತಿ ಹಾನಿ:
ಬೀದರ್‌ನಲ್ಲಿ ಹೆಚ್ಚು ಮೂರುವರೆ ತಿಂಗಳ ಅವಧಿಯಲ್ಲಿ ಮಳೆ–ಗಾಳಿ ಸಂಬಂಧಿತ ಅವಘಡಗಳಲ್ಲಿ ಜೆಸ್ಕಾಂ ವ್ಯಾಪ್ತಿಯಲ್ಲಿ 65.73 ಕಿಲೊ ಮೀಟರ್‌ಗಳಷ್ಟು ಉದ್ದದ ವಿದ್ಯುತ್ ತಂತಿಗೆ ಹಾನಿಗೆ ಹಾನಿಯಾಗಿದೆ. ಈ ಪೈಕಿ ಬೀದರ್ ಜಿಲ್ಲೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಂದರೆ 61.73 ಕಿ.ಮೀ ವಿದ್ಯುತ್ ತಂತಿಗೆ ಹಾನಿಯಾಗಿದೆ. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ 2.99 ಕಿ.ಮೀ ಕೊಪ್ಪಳ ಜಿಲ್ಲೆಯಲ್ಲಿ 500 ಮೀಟರ್ ಯಾದಗಿರಿ ಜಿಲ್ಲೆಯಲ್ಲಿ 400 ಮೀಟರ್ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 110 ಮೀಟರ್ ವಿದ್ಯುತ್ ತಂತಿಗೆ ಹಾನಿಯಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಗಾಳಿಯಿಂದ ಹಾನಿಗೊಳಗಾದ ವಿದ್ಯುತ್ ತಂತಿ ವಿದ್ಯುತ್ ಕಂಬ ಹಾಗೂ ಟಿ.ಸಿಗಳ ದುರಸ್ತಿಯನ್ನು ಆದ್ಯತೆ ಮೇಲೆ ಮಾಡಿ ತ್ವರಿತವಾಗಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆಕೃಷ್ಣ ಬಾಜಪೇಯಿ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.