ADVERTISEMENT

ಮುಳುಗುವ ಹಂತ ತಲುಪಿದ ಸೇತುವೆ|ಜೇವರ್ಗಿ ಬಳಿ ಹೆದ್ದಾರಿ ಬಂದ್: ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 9:40 IST
Last Updated 27 ಸೆಪ್ಟೆಂಬರ್ 2025, 9:40 IST
   

ಕಲಬುರಗಿ: ಜಿಲ್ಲೆಯ ಜೇವರ್ಗಿ ‌ಪಟ್ಟಣದ ಬಳಿ ಭೀಮಾ ನದಿಯ ಸೇತುವೆ ಮುಳುಗುವ ಹಂತ ತಲುಪಿದ್ದರಿಂದ ಶನಿವಾರ ಬೆಳಿಗ್ಗೆಯಿಂದಲೇ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮತ್ತಿತರ ಭಾಗಗಳಿಂದ ಬಂದ ಪ್ರಯಾಣಿಕರು ಸೇತುವೆ ಬಳಿಯೇ ಉಳಿದಿದ್ದು, ಕಲಬುರಗಿ ತಲುಪಲು ಪರದಾಡುತ್ತಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್, ಲಾರಿಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನಗಳು ರಸ್ತೆ ಪಕ್ಕದಲ್ಲಿ ಸಾಲುಗಟ್ಟಿ ನಿಂತಿವೆ.

ADVERTISEMENT

ಜೇವರ್ಗಿ ಭಾಗದಿಂದ ಬಂದ ಪ್ರಯಾಣಿಕರು ತಮ್ಮ ಲಗೇಜ್ ಗಳನ್ನು ಹೊತ್ತುಕೊಂಡು ಸೇತುವೆ ಮೇಲೆ ನಡೆದುಕೊಂಡು ಬರುತ್ತಿರುವ ದೃಶ್ಯ ಕಂಡು ಬಂತು.

ಬೆಳಿಗ್ಗೆಯೇ ಬೆಂಗಳೂರಿನಿಂದ ಬಂದಿದ್ದೇವೆ. ಕಲಬುರಗಿಗೆ ಹೋಗಲು ಯಾವುದೇ ವಾಹನಗಳಿಲ್ಲ ಎಂದು ಕಲಬುರಗಿ ನಿವಾಸಿ ನಂದಿನಿ ಸ್ಥಳಕ್ಕೆ ಭೇಟಿ ನೀಡಿದ್ದ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಯಾದಗಿರಿ ಜಿಲ್ಲೆಯ ಸುರಪುರದ ಅರಕೇರಿಯಿಂದ ಬಂದಿದ್ದ ಶರಣಮ್ಮ ಸಹ ವಾಹನಗಳಿಗಾಗಿ ಕಾಯುತ್ತಿದ್ದರು.

ಭೀಮಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು:

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಸೀನಾ, ಉಜನಿ ಹಾಗೂ ವೀರ್ ಜಲಾಶಯದಿಂದ 3.50 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ‌. ಇದರಿಂದಾಗಿ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ, ಕೂಡಿ, ಕೋಬಾಳ, ಮಂದರವಾಡ, ಹಂದನೂರ, ಇಟಗಾ, ಮಾಹೂರ, ಹಂಚಿನಾಳ, ಬೋಸಗಾ, ರಾಸಣಗಿ, ರದ್ದೇವಾಡಗಿ, ನರಿಬೋಳ, ಕಟ್ಟಿಸಂಗಾವಿ, ರಾಂಪುರ, ಮದರಿ, ಯನಗುಂಟಿ, ಮಲ್ಲಾ ಕೆ, ಮಲ್ಲಾ ಬಿ, ರಾಜವಾಳ, ಕಲಬುರಗಿ ತಾಲ್ಲೂಕಿನ ಸೋಮನಾಥ ಹಳ್ಳಿ, ಫಿರೋಜಾಬಾದ್, ಸರಡಗಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ತಂಡಗಳು ಬೀಡುಬಿಟ್ಟಿವೆ.

ರಜೆ ಘೋಷಣೆ:

ಶನಿವಾರ, ಭಾನುವಾರವೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದರಿಂದ 27, 28ರಂದು ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಸೂರ್ಯಕಾಂತ ಮದಾನೆ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.