ಜೇವರ್ಗಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮಾಜದವರು ಪಟ್ಟಣದಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರಿಂದ ಆಚರಿಸಿದರು.
ಪಟ್ಟಣದಲ್ಲಿರುವ ದರ್ಗಾ ಹಾಗೂ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚಿಣ್ಣರಾದಿಯಾಗಿ ಎಲ್ಲರೂ ಹೊಸ ಬಟ್ಟೆ ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮ್ಮ ಬಂಧು–ಬಾಂಧವರು ಹಾಗೂ ಸ್ನೇಹಿತರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ನೂರಾರು ಜನರು ಪಾಲ್ಗೊಂಡಿದ್ದರು. ಖಾಜಾ ಕಾಲೋನಿಯ ಮದೀನಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಅಖಂಡೇಶ್ವರ ವೃತ್ತ, ಡಾ.ಅಂಬೇಡ್ಕರ್ ಸರ್ಕಲ್, ಬಸವೇಶ್ವರ ವೃತ್ತದ ಮೂಲಕ ಮರಳಿ ಖಾಜಾ ಕಾಲೋನಿ ಮಸೀದಿಗೆ ಮರಳಿತು.
ಮೆರವಣಿಗೆಯುದ್ದಕ್ಕೂ ಘೋಷಣೆಗಳು ಮೊಳಗಿದವು. ಯುವಜನರು ಧ್ವಜಗಳನ್ನು ಹಿಡಿದು ಸಾಗಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಸ್ಥಳೀಯ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಕುಡಿಯುವ ನೀರು, ತಂಪು ಪಾನಿಯ, ಹಣ್ಣು ನೀಡಿದರು. ಜನರು ರಸ್ತೆಯ ಅಕ್ಕಪಕ್ಕ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಮೆರವಣಿಗೆಯಲ್ಲಿ ಮೌಲಾನಾ ರಿಜ್ವಾನ್ ಸಾಬ, ಮೌಲಾನಾ ಗುಲ್ಜಾರ್ ಸಾಬ, ಪ್ರಮುಖರಾದ ಮಹಿಬೂಬ ಪಟೇಲ ಕೋಬಾಳ, ಮೊಹಸೀನ್ ಜಹಾಗೀರದಾರ, ರೌಫ್ ಸಾಬ ಹವಲ್ದಾರ್, ಮಹಿಬೂಬ ಸಾಬ ಕೆಂಭಾವಿ, ಮೋಹಿಯುದ್ದೀನ್ ಇನಾಮದಾರ, ಏಜಾಜ್ ನಮಾಜಿ ಸೇರಿದಂತೆ ಹಕವಾರು ಜನ ಭಾಗವಹಿಸಿದ್ದರು.
ಆಳಂದ: ‘ನಮ್ಮ ದೇಶದಲ್ಲಿನ ವೈವಿಧ್ಯ ಸಂಸ್ಕೃತಿ, ಆಚರಣೆಗಳಲ್ಲಿ ಪರಸ್ಪರ ಸೌಹಾರ್ದತೆ ಗುಣ ಬೆಳೆಸಿಕೊಂಡರೆ ಭಾರತ ಬಲಿಷ್ಠ ರಾಷ್ಟ್ರವಾಗಿ ಪ್ರಗತಿ ಹೊಂದುತ್ತದೆ’ ಎಂದು ಬೀದರ್ ಸಂಸದ ಸಾಗರ ಖಂಡ್ರೆ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅಲ್ ಪಲಾಹ್ ಬೈತುಲ್ ಮಾಲ್ ಟ್ರಸ್ಟ್ ನೇತೃತ್ವದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
ಕೆಎಂಎಫ್ ಅಧ್ಯಕ್ಷ ಆರ್. ಕೆ. ಪಾಟೀಲ ಮಾತನಾಡಿ, ‘ಶಾಂತಿ, ನೆಮ್ಮದಿ ಹಾಗೂ ಅಭಿವೃದ್ಧಿಯುತ ಸಮಾಜ ನಿರ್ಮಾಣಕ್ಕೆ ಪರಸ್ಪರರಲ್ಲಿ ಸಹೋದರತೆ ಭಾವನೆ ಮುಖ್ಯವಾಗಿದೆ. ನಮ್ಮ ಎಲ್ಲ ಧಾರ್ಮಿಕ ಹಬ್ಬಗಳು ಒಗ್ಗಟ್ಟು, ಸಂತೋಷ ಹಾಗೂ ಪ್ರೀತಿ, ಸ್ನೇಹದ ಸಂಕೇತವಾಗಿವೆ’ ಎಂದರು.
ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜ, ಹಿರೇಮಠ ಸಿದ್ದೇಶ್ವರ ಸ್ವಾಮೀಜಿ, ಮೌಲಾನಾ ಮುಸ್ತಾಪಾ, ಪುರಸಭೆ ಅಧ್ಯಕ್ಷ ಫಿರ್ದೋಶಿ ಅನ್ಸಾರಿ, ಮುಖಂಡರಾದ ಅಹ್ಮದಲಿ ಚುಲಬುಲ್, ಸಿದ್ದರಾಮ ಪ್ಯಾಟಿ, ಪ್ರಕಾಶ ಮೂಲಭಾರತಿ, ಅಶೋಕ ಸಾವಳೇಶ್ವರ, ಮಲ್ಲಪ್ಪ ಹತ್ತರಕಿ, ರೇವಣಸಿದ್ದ ನಾಗೂರೆ, ಮಜರ್ ಹುಸೇನ್, ಮೌಲಾ ಮುಲ್ಲಾ, ಸಂಜಯ ನಾಯಕ, ರಮೇಶ ಮಾಡಿಯಾಳಕರ್, ಗುಲಾಬಹುಸೇನ್ ಟಪ್ಪೆವಾಲೆ, ಸೂರ್ಯಕಾಂತ ತಟ್ಟಿ, ಆನಂದ ದೇಶಮುಖ, ದಿಲೀಪ ಕ್ಷೀರಸಾಗರ, ಸುಲೇಮಾನ ಮುಗುಟ್, ಸಿದ್ದು ಪೂಜಾರಿ ಉಪಸ್ಥಿತರಿದ್ದರು.
ನಂತರ ರಜ್ವಿ ರಸ್ತೆ ಮಾರ್ಗವಾಗಿ ಸಾವಿರಾರು ಮುಸ್ಲಿಮರು ಮೆರವಣಿಗೆ ನಡೆಸಿದರು. ಮಕ್ಕಳು ತಯಾರಿಸಿದ ಮಕ್ಕಾ, ಮದೀನಾ ಮತ್ತಿತರ ಇಸ್ಲಾಮಿಕ್ ಯಾತ್ರಾ ಸ್ಥಳಗಳ ಮಾದರಿಗಳ ಪ್ರದರ್ಶನಗಳು ಗಮನ ಸೆಳೆದವು. ಕುರಾನ್ ಪಠಣ ಹಾಗೂ ಧಾರ್ಮಿಕ ಆಚರಣೆಗಳೊಂದಿಗೆ ಮೆರವಣಿಗೆಯು ಸಿದ್ದಾರ್ಥ್ ಚೌಕ್, ಗಣೇಶ ಚೌಕ್ ಮಾರ್ಗವಾಗಿ ದರ್ಗಾವರೆಗೂ ಸಾಗಿ ಬಂತು.
ವಿವಿಧ ವಾದ್ಯಗಳ ಸಡಗರ, ಸಂಭ್ರಮದ ಜತೆಗೆ ರಜ್ವಿ ರಸ್ತೆ, ದರ್ಗಾ ಚೌಕ್ ಮತ್ತು ಲಾಡ್ಲೆ ಮಶಾಕ್ ದರ್ಗಾಕ್ಕೆ ಹಾಕಿದ ವಿದ್ಯುತ್ ದೀಪಾಲಂಕಾರ ವಿಶೇಷವಾಗಿ ಹಬ್ಬದ ಸಂಭ್ರಮ ಹೆಚ್ಚಿಸಿತ್ತು. ಆಳಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮುಸ್ಲಿಮರು ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಿವೈಎಸ್ ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕಾಳಗಿ: ‘ನಾವು ಯಾವುದೇ ಧರ್ಮದಲ್ಲಿ ಹುಟ್ಟಿರಲಿ, ನಮ್ಮ ಧರ್ಮದ ಚೌಕಟ್ಟಿನಲ್ಲಿದ್ದು ಮತ್ತೊಂದು ಧರ್ಮಿಯರನ್ನು ಪ್ರೇಮದಿಂದ ಕಾಣುವುದೇ ನಿಜವಾದ ಮಾನವ ಧರ್ಮ’ ಎಂದು ಮಳಖೇಡ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದರಿ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಮುಸ್ಲಿಂ ಸಮಾಜದವರು ಆಯೋಜಿಸಿದ್ದ ಈದ್ ಮಿಲಾದ್ ಉನ್ ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ ‘ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶವಾಗಿದೆ. ನಾವೆಲ್ಲರೂ ಭಾವೈಕ್ಯತೆ ಬಂಧುಗಳಾಗಿ ಮುನ್ನಡೆ ಸಾಧಿಸಬೇಕು’ ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಮಾತನಾಡಿದರು. ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಜೀಜ್ ಬಾಬಾ, ಹೈದರ್ ಸಾಹೇಬ, ಗುರುನಂಜಯ್ಯ ಹಿರೇಮಠ, ಜಿ.ಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಪಿಎಸ್ಐ ತಿಮ್ಮಯ್ಯ ಬಿ.ಕೆ, ಶಿವಶರಣಪ್ಪ ಕಮಲಾಪುರ, ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ರಾಘವೇಂದ್ರ ಗುತ್ತೇದಾರ, ವೇದಪ್ರಕಾಶ ಮೋಟಗಿ, ಗುಡುಸಾಬ ಮಾಸ್ತರ, ಪರಮೇಶ್ವರ ಮಡಿವಾಳ, ಜಗನ್ನಾಥ ಚಂದನಕೇರಿ, ಸಂತೋಷ ಪತಂಗೆ, ಮಹೇಶ ಗುತ್ತೇದಾರ, ಸಂತೋಷ ನರನಾಳ, ರೇವಣಸಿದ್ದ ಕಟ್ಟಿಮನಿ, ರಾಜಕುಮಾರ ಸಿಂಗಶೆಟ್ಟಿ, ಸಂಗಮೇಶ ಬಡಿಗೇರ ಅನೇಕರು ವೇದಿಕೆಯಲ್ಲಿದ್ದರು. ಮಹ್ಮದ ಅಲಿ ಕಂಚಗಾರ ನಿರೂಪಿಸಿದರು.
ಚಿಂಚೋಳಿ: ‘ದೇಶದಲ್ಲಿ ಹಿಂದೂ ಮುಸ್ಲಿಂ ಹೆಸರಲ್ಲಿ ಒಡೆದು ಆಳಲಾಗುತ್ತಿದೆ. ದ್ವೇಷ ಹರಡುವ ಶಕ್ತಿಗಳು ಹೆಚ್ಚಾಗುತ್ತಿವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಕಳವಳ ವ್ಯಕ್ತಪಡಿಸಿದ್ದಾರೆ.
ಚಂದಾಪುರದ ಬಂಜಾರಾ ಭವನದಲ್ಲಿ ತಾಲ್ಲೂಕು ಮುಸ್ಲಿಂ ಅಭಿವೃದ್ಧಿ ಸಮಿತಿ ಹಾಗೂ ಜಮಿಯತ್ ಉಲ್ಮಾ ಎ ಹಿಂದ್ ಸಂಘಟನೆಗಳಿಂದ ಶುಕ್ರವಾರ ನಡೆದ ಪ್ರವಾದಿ ಮುಹಮದ್ ಪೈಗಂಬರ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಮತ್ತು ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ಉತ್ತರ ಭಾರತದಲ್ಲಿ ಒಂದು ಮಸೀದಿ ಕೆಡವಿದರೂ ಇನ್ನು ಅವರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿರುವ ಮಸೀದಿಗಳ ಬಗ್ಗೆ ಮಾತಗಳಾಡುತ್ತಾರೆ. ಎಷ್ಟೇ ದ್ವೇಷ ಹರಡಿದರೂ ನಿಮ್ಮ ಕನಸು ನನಸಾಗುವುದಿಲ್ಲ. ಚಿಂಚೋಳಿ ಹಿಂದೂ ಮುಸ್ಲಿಂರ ಸಾಮರಸ್ಯದ ಪ್ರತೀಕವಾಗಿದೆ’ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಭೀಮರಾವ್ ಟಿಟಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂರ ಪಾತ್ರ ಹೆಚ್ಚಿದೆ ಎಂದರು.
ಹಿರಿಯ ಮುಖಂಡ ಬಾಬುರಾವ್ ಪಾಟೀಲ, ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ವಿದ್ಯಾರ್ಥಿ ಮನ್ಹಾ, ಮಹಮದ್ ಖುದ್ದುಸ್, ಮಾತನಾಡಿದರು. ಟಿಎಚ್‌ಒ ಡಾ. ಮಹಮದ್ ಗಫಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಉಪಾಧ್ಯಕ್ಷೆ ಸುಲ್ತಾನಾ ಬೇಗಂ, ಜಗನ್ನಾಥ ಗುತ್ತೇದಾರ, ಕೆ.ಎಂ.ಬಾರಿ, ಅನ್ವರ್ ಖತೀಬ್, ಎಫ್‌ಎಂ ಹುಸೇನಿ, ಶರಣು ಪಾಟೀಲ, ಲಕ್ಷ್ಮಣ ಅವುಂಟಿ, ರಾಜು ಪವಾರ, ಶೇಖ ಫರೀದ್, ಆರ್ ಗಣಪತರಾವ್, ಮಹಮದ್ ಹಾದಿ ಮೊದಲಾದವರು ಇದ್ದರು.
ಇದೇ ವೇಳೆಯಲ್ಲಿ ಪೌರ ಕಾರ್ಮಿಕರಿಗೆ ಉಚಿತವಾಗಿ ಸೀತೆ ವಿತರಿಸಿ ಸನ್ಮಾನಿಸಿದರು. ಸಮಾಜಕ್ಕೆ ಕೊಡುಗೆ ವಿವಿಧ ಮುಖಂಡರಿಗೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಕಲಬುರಗಿಯ ಜಿಮ್ಸ್ ಬ್ಲಡ್ ಬ್ಯಾಂಕಿಗೆ ಒಟ್ಟು 55 ಮಂದಿ ಹಿಂದೂ ಹಾಗೂ ಮುಸ್ಲಿಮರು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.