
ಕಡಕೋಳ ಮಡಿವಾಳೇಶ್ವರ ಜಾತ್ರೆ ತೇರಿನ ಆ್ಯಕ್ಸೆಲ್ ಮುರಿದು ಅರ್ಧಕ್ಕೆ ನಿಂತ ರಥೋತ್ಸವ
ಯಡ್ರಾಮಿ (ಕಲಬುರಗಿ ಜಿಲ್ಲೆ): ಈ ಭಾಗದಲ್ಲಿ ಹೆಸರುವಾಸಿಯಾಗಿರುವ ತಾಲ್ಲೂಕಿನ ಕಡಕೋಳ ಗ್ರಾಮದ ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಮಹಾರಥೋತ್ಸವದ ವೇಳೆ ತೇರಿನ ಆ್ಯಕ್ಸೆಲ್ ಮುರಿದಿದ್ದು, ವಾರ್ಷಿಕ ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.
ನಿಗದಿಯಂತೆ ಸೂರ್ಯಾಸ್ತದ ಹೊತ್ತಿಗೆ ಮಠದ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಬಳಿಕ ಭಕ್ತರು ಭಕ್ತಿಭಾವದಿಂದ ಮಡಿವಾಳೇಶ್ವರ ಪರ ಘೋಷಣೆ ಮೊಳಗಿಸುತ್ತ ತೇರು ಎಳೆಯುತ್ತಿದ್ದರು.
ಮಠದ ಎದುರಿನಿಂದ ತೇರು 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿಯಿತು. ಇದರಿಂದ ರಥೋತ್ಸವ ಅರ್ಧದಲ್ಲೇ ನಿಂತಿದೆ.
ಅವಘಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸುತ್ತಲಿನ ಭಕ್ತರನ್ನು ಚದುರಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಸದ್ಯ ಕಲ್ಲು ಹಾಗೂ ಮರದ ತುಂಡು ಜೋಡಿಸಿಟ್ಟು ಅದು ಬೀಳದಂತೆ ಕ್ರಮಹಿಸಿದ್ದಾರೆ.
ಪ್ರತಿ ವರ್ಷ ಜಾತ್ರೆಯ ಅಂಗವಾಗಿ ರಥವನ್ನು ಮಠದ ಮುಂಭಾಗದಿಂದ ಕಡಕೋಳ ಗ್ರಾಮ ಪಂಚಾಯಿತಿ ತನಕ ಎಳೆದು ಮರಳಿ ಮಠದ ಎದುರು ತಂದು ನಿಲ್ಲಿಸಲಾಗುತ್ತಿತ್ತು. ಆದರೆ, ಈ ಸಲ ಅರ್ಧದಲ್ಲೆ ರಥ ನಿಂತಿದ್ದು, ಸಂಭ್ರಮದಿಂದ ತೇರು ಎಳೆಯಲು, ರಥೋತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.