ADVERTISEMENT

ಪ್ರವಾಹಕ್ಕೆ ಕೊಚ್ಚಿ ಹೋದ ಬಡವರ ಬದುಕು

ಮಳಖೇಡ: ಮಳೆ ನಿಂತರೂ ಜನರಿಗಿಲ್ಲ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 19:31 IST
Last Updated 17 ಅಕ್ಟೋಬರ್ 2020, 19:31 IST
ಸಡಂ ತಾಲ್ಲೂಕಿನ ಮಳಖೇಡದ ದರ್ಗಾ ಕಾಲೊನಿಯ ಜನ ದವಸ ಧಾನ್ಯಗಳನ್ನು ಒಣಗಲು ಹಾಕಿರುವುದು
ಸಡಂ ತಾಲ್ಲೂಕಿನ ಮಳಖೇಡದ ದರ್ಗಾ ಕಾಲೊನಿಯ ಜನ ದವಸ ಧಾನ್ಯಗಳನ್ನು ಒಣಗಲು ಹಾಕಿರುವುದು   

ಸೇಡಂ: ಭಾರಿ ಮಳೆ ಮತ್ತು ಕಾಗಿಣಾ ನದಿಯ ಪ್ರವಾಹ ನಿಂತರೂ ಸಹ ಮಳಖೇಡನ ದರ್ಗಾ ಕಾಲೊನಿಯ ನಿವಾಸಿಗಳು ಪ್ರವಾಹದ ಭೀತಿಯಿಂದ ಇನ್ನೂ ಹೊರಬಂದಿಲ್ಲ.

ಮಳೆ ನೀರಿನ ಆರ್ಭಟಕ್ಕೆ ದರ್ಗಾ ಕಾಲೋನಿ, ಸಮಖೇಡ್ ತಾಂಡಾ, ಸಂಗಾವಿ, ಮೀನಹಾಬಾಳ ಸೇರಿದಂತೆ ಮಳಖೇಡದ ಕೆಲ ಬಡವಾಣೆ ನಿವಾಸಿಗಳ ಬದುಕು ಅಕ್ಷರಶಃ ಕೊಚ್ಚಿ ಹೋಗಿದೆ. ನಿವಾಸಿಗಳು ತಮ್ಮ ಮನೆಗಳ ಸ್ವಚ್ಛತೆ ಸೇರಿದಂತೆ ಸರಕು ಸರಂಜಾಮುಗಳನ್ನು ಜೋಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

‘ವಿದ್ಯುತ್ ಇಲ್ಲದೆ ಕಾಲ ಕಳೆಯೋದು ಸವಾಲಾದರೆ, ಕುಡಿಯಲು ನೀರು ಸಹ ಸಿಗುತ್ತಿಲ್ಲ. ನಮಗೆ ಅಡುಗೆ ಮಾಡಲು ನೀರು ಸಹ ನಮಗೆ ಸಿಗದಂತಾಗಿದೆ’ ಎನ್ನುವುದು ಅವರ ಅಳಲು.

ADVERTISEMENT

‘ನಮ್ಮ ಮನೆ ಪೂರ್ತಿ ಮುಳುಗಿತ್ತು. ರಾತ್ರೋ ರಾತ್ರಿ ದರ್ಗಾದಲ್ಲಿ ಉಳಿದು ಪ್ರಾಣ ಉಳಿಸಿಕೊಂಡಿವಿ. ಮನೆಯಲ್ಲಿನ ಕಾಗದಗಳು ಎಲ್ಲವೂ ಒದ್ದೆಯಾಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ. ನಮ್ಮ ಸಮಸ್ಯೆ ಯಾರ್ ಹತ್ರ ಹೇಳಿಕೊಳ್ಳೋಣಾ?’ ಎಂದು ಪ್ರಶ್ನಿಸಿದರು ಜನ.

‘ದರ್ಗಾ ಕಾಲೊನಿಯಲ್ಲಿ ಎರಡು ದಿನಗಳ ಕಾಲ ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ರೇಷನ್ ಕೊಟ್ಟಿದ್ದರು. ಆದರೆ ನಾವೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದಿವಿ. ಶನಿವಾರ ಇಂದು ನಮಗೆ ಊಟ ಮಾಡೋಣಾವೆಂದರೆ ಮನೆಯಲ್ಲಿದ್ದ ದವಸ ಧಾನ್ಯಗಳು ನೀರಲ್ಲಿ ಒದ್ದೆಯಾಗಿವೆ. ಅಡುಗೆ ಮಾಡಲು ಸೂಕ್ತವಲ್ಲದ ಸ್ಥಿತಿಯಲ್ಲಿ ಮನೆಯಲ್ಲಿನ ಊಟದ ಸಾಮಗ್ರಿಗಳಾಗಿವೆ. ಒಂದು ಹೊತ್ತಿಗಾಗುವಷ್ಟು ಅಡುಗೆ ಮಾಡಿಕೊಂಡು ಮನೆ ಸ್ವಚ್ಛಗೊಳಿಸುತ್ತಿದ್ದೇವೆ. ಮನೆಯಲ್ಲಿ ಇನ್ನೂ ಒಲೆ ಕೂಡ ಹಚ್ಚಿಲ್ಲ’ ಎನ್ನುತ್ತಾರೆ ಬಡವಾಣೆಯ ನಿವಾಸಿ ಲಕ್ಷ್ಮಿ.

‘ನಮ್ಮ ಮನೆಯಲ್ಲಿ ಅಡುಗೆ ಮಾಡುವವರೆಗಾದರೂ ಊಟ ಕೊಟ್ಟರೆ, ನಮ್ಮ ಕಾರ್ಯಕ್ಕೆ ಕೊಂಚ ಅನುಕೂಲವಾಗುತ್ತದೆ. ಈಗ ದಸರಾ ಹಬ್ಬ ಬೇರೆ ಬಂದಿದ್ದು, ದೇವಿ ಆರಾಧನೆ ಮಾಡುವ ಸಿದ್ಧತೆ ಬೇಕು. ಎಲ್ಲವೂ ಒಮ್ಮೆಲೇ ಬಂದು ನಮ್ಮ ಬದುಕು ನಲುಗುವಂತಾಗಿದೆ’ ಎಂದು ದುಃಖ ತೋಡಿಕೊಂಡರು ಜಗದೇವಿ.

***

ಎರಡು ದಿನಗಳ ಕಾಲ ನಿರಾಶ್ರಿತರ ಪರಿಹಾರ ಕೇಂದ್ರ ತೆರೆದಿದ್ದೇವೆ. ಜನ ಒಂದೆಡೆ ನೆಲೆಸಿದರೆ ಅವರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಎಲ್ಲರೂ ಅವರವರ ಮನೆಯಲ್ಲಿದ್ದರೆ ಪ್ರತಿಯೊಬ್ಬರಿಗೂ ಊಟ ಒಯ್ದು ಕೊಡುವುದು ಕಷ್ಟ
– ಬಸವರಾಜ ಬೆಣ್ಣೆಶಿರೂರ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.