ಕಲಬುರಗಿ: ಜಮೀನುಗಳನ್ನು ರೈತರಿಗೆ ಗೊತ್ತಾಗದಂತೆ ಪರಭಾರೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ರೈತರ ಆಸ್ತಿಗಳನ್ನು ಆಧಾರ್‌ನೊಂದಿಗೆ ಜೋಡಿಸುವ ಅಭಿಯಾನ ಕೈಗೊಂಡಿರುವ ಜಿಲ್ಲಾಡಳಿತವು ಇದುವರೆಗೆ 6,01,985 ರೈತರ ಜಮೀನುಗಳ ಪಹಣಿಗಳೊಂದಿಗೆ ಜೋಡಣೆ (ಸೀಡಿಂಗ್) ಮಾಡಿದ್ದು, ಶೇ 86.20ರಷ್ಟು ಪ್ರಗತಿ ಸಾಧಿಸಿದೆ.
ಕಲಬುರಗಿಯಲ್ಲಿ ವಿಭಾಗ ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ಮುಗ್ಧ ರೈತರ ಭೂಮಿ ಅಕ್ರಮ ಪರಭಾರೆ ಆಗುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಪಹಣಿಗಳನ್ನು ಆಧಾರ್‌ಗೆ ಸೀಡಿಂಗ್ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದರು.
ಹೀಗಾಗಿ, ಆಗಾಗ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಆಧಾರ್ ಸೀಡಿಂಗ್‌ನ ಪ್ರಗತಿ ಪರಿಶೀಲನೆ ಮಾಡಿದ್ದರು.
ಜಿಲ್ಲೆಯಲ್ಲಿ 9,31,136 ಜಮೀನು ಮಾಲೀಕರಿದ್ದು, ಇದುವರೆಗೆ 6,01,985 ರೈತರು ಪಹಣಿಗಳನ್ನು ತಮ್ಮ ಆಧಾರ್‌ನೊಂದಿಗೆ ಸೀಡಿಂಗ್ ಮಾಡಿಸಿಕೊಂಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳು ಇದುವರೆಗೆ 79,609 ರೈತರು ಭೂ ಪರಿವರ್ತನೆ ಮಾಡಿಕೊಂಡಿದ್ದರ ಕುರಿತು ವರದಿ ಪಡೆದುಕೊಂಡಿದ್ದಾರೆ.
97,884 ಪಹಣಿ ಮಾಲೀಕರ ಸಾವು: ಪಹಣಿಗಳನ್ನು ಆಧಾರ್‌ಗೆ ಸೀಡಿಂಗ್ ಮಾಡುವ ಸಂದರ್ಭದಲ್ಲಿ 97,884 ಪಹಣಿಗಳ ಮಾಲೀಕರು ಮೃತಪಟ್ಟಿರುವ ಸಂಗತಿ ಗೊತ್ತಾಗಿದೆ. ಆ ರೈತರ ಮರಣ ಉತಾರ ಸಲ್ಲಿಸಿ ಅವರ ಉತ್ತರಾದಿಗಳು ಜಮೀನುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್.
ಲ್ಯಾಂಡ್ ಬೀಟ್‌ನಲ್ಲಿ ಶೇ 97.86ರಷ್ಟು ಪ್ರಗತಿ: ಒತ್ತುವರಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಿ ಭೂಮಿಯನ್ನು ಅಭಿಯಾನದ ರೂಪದಲ್ಲಿ ಗುರುತಿಸುವಂತೆಯೂ ಕಂದಾಯ ಸಚಿವರು ಸೂಚನೆ ನೀಡಿದ್ದರು. ಅದರನ್ವಯ ಕಾರ್ಯಪ್ರವೃತ್ತವಾಗಿರುವ ಜಿಲ್ಲಾಡಳಿತವು ಇದುವರೆಗೆ 32,390 ಸರ್ಕಾರಿ ಭೂಮಿಯ ಪೈಕಿ 31,696 ಭೂಮಿಯನ್ನು ಪತ್ತೆ ಹಚ್ಚುವ ಮೂಲಕ ಲ್ಯಾಂಡ್ ಬೀಟ್‌ನಲ್ಲಿ ಶೇ 97.86ರಷ್ಟು ಪ್ರಗತಿ ಸಾಧಿಸಿದೆ. ಸರ್ಕಾರಿ ಪಡ, ಬೀಳು, ಗೈರಾಣ ಭೂಮಿಯೂ ಸೇರಿದೆ.
ಮಾರ್ಚ್‌ನಿಂದ ಮೇ ಅಂತ್ಯದ ವೇಳೆಗೆ ವಿವಿಧ ತಹಶೀಲ್ದಾರ್‌ಗಳ ಬಳಿ ಇದ್ದ 310 ಭೂ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಹಳೆಯ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಿ ರೈತರಿಗೆ ನ್ಯಾಯ ಒದಗಿಸಲಾಗುತ್ತಿದೆಫೌಜಿಯಾ ತರನ್ನುಮ್ ಬಿ. ಜಿಲ್ಲಾಧಿಕಾರಿ
77 ಲಕ್ಷ ಕಂದಾಯ ದಾಖಲೆಗಳು ಸ್ಕ್ಯಾನ್ ಕಂದಾಯ ಇಲಾಖೆಯ ಭೂಸುರಕ್ಷಾ ಯೋಜನೆಯಡಿ ಕಳೆದ ಏಳು ತಿಂಗಳಲ್ಲಿ ಜಿಲ್ಲೆಯಲ್ಲಿ 77 ಲಕ್ಷ ಕಂದಾಯ ದಾಖಲೆಯ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ರಾಜ್ಯದ ಆಯ್ದ 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಭೂಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು ಜಿಲ್ಲೆಯ ಚಿಂಚೋಳಿಯೂ ಈ ಪಟ್ಟಿಯಲ್ಲಿ ಸೇರಿದೆ. ಜಿಲ್ಲೆಯಲ್ಲಿ 1.27 ಕೋಟಿ ಕಂದಾಯ ದಾಖಲೆಯ ಪುಟಗಳ ಡೇಟಾ ನಮೂದು ಹಾಗೂ ಸ್ಕ್ಯಾನಿಂಗ್ ಮಾಡಬೇಕಿದ್ದು ಆ ಪೈಕಿ ಚಿಂಚೋಳಿ ತಾಲ್ಲೂಕಿನ 1652354 ಪುಟಗಳು ಸೇರಿದಂತೆ ಜಿಲ್ಲೆಯಾದ್ಯಂತ 7724655 ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸ್ಕ್ಯಾನ್ ಮಾಡಿದ ನಂತರ ಅವುಗಳನ್ನು ಶಿರಸ್ತೇದಾರರು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ನಂತರ ಡಿಜಿಟಲ್ ಸಹಿಯೊಂದಿಗೆ ಅವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಭೂ ಸುರಕ್ಷಾ ಯೋಜನೆಯಡಿ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡುವುದರಿಂದ ದಾಖಲೆಗಳನ್ನು ತಿದ್ದುವ ನಾಶ ಮಾಡುವುದು ಸಾಧ್ಯವಾಗುವುದಿಲ್ಲ. ರೈತರು ಕಚೇರಿಗೆ ಬರುವುದೂ ತಪ್ಪುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.