ADVERTISEMENT

ಕಲಬುರಗಿ: ಸಂಚಾರ ಪೊಲೀಸರಿಗೆ ಎ.ಸಿ. ಹೆಲ್ಮೆಟ್

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:12 IST
Last Updated 5 ಮೇ 2025, 16:12 IST
ಕಲಬುರಗಿಯಲ್ಲಿ ಸೋಮವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ಎ.ಸಿ. ಹೆಲ್ಮೆಟ್ ಪ್ರದರ್ಶಿಸಿದರು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಸೋಮವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ಎ.ಸಿ. ಹೆಲ್ಮೆಟ್ ಪ್ರದರ್ಶಿಸಿದರು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು   

ಕಲಬುರಗಿ: ಸುಡುವ ಬಿಸಿಲಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಸಂಚಾರ ಪೊಲೀಸ್ ಸಿಬ್ಬಂದಿಗೆ ಪ್ರಾಯೋಗಿಕವಾಗಿ ಹವಾನಿಯಂತ್ರಿತ (ಎ.ಸಿ.) ಹೆಲ್ಮೆಟ್‌ಗಳನ್ನು ನೀಡಲಾಗಿದೆ. ಇದರ ಜತೆಗೆ ಅತ್ಯಾಧುನಿಕ ಸೌಕರ್ಯಗಳ ಉಪಕರಣಗಳನ್ನು ಕಲ್ಪಿಸಲಾಗಿದೆ.

ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ತಲಾ 10 ಎ.ಸಿ. ಹೆಲ್ಮೆಟ್‌ ಹಾಗೂ ಮಾಲಿನ್ಯ ತಡೆಯುವ ಮಾಸ್ಕ್‌ಗಳು, 140 ಮಿಂಚುವ ಜಾಕೆಟ್‌ ಹಾಗೂ 150 ಲೈಟ್ ಬ್ಯಾಟೊನ್‌ಗಳನ್ನು ವಿತರಣೆ ಮಾಡಲಾಯಿತು.

ಬಳಿಕ ಮಾತನಾಡಿದ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ., ‘ಹವಾನಿಯಂತ್ರಿತ ಹೆಲ್ಮೆಟ್‌ಗಳು ನಮ್ಮ ಸಂಚಾರ ಸಿಬ್ಬಂದಿಗೆ ಬೇಸಿಗೆಯ ಬಿಸಿಲಿನಿಂದ ರಕ್ಷಣೆ ನೀಡಲಿವೆ. ಪ್ರಾಥಮಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕೆಲವರಿಗೆ ಮಾತ್ರವೇ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಗೆ ನೀಡಲಾಗುವುದು’ ಎಂದರು.

ADVERTISEMENT

‘ಎ.ಸಿ. ಹೆಲ್ಮೆಟ್‌ ಧರಿಸಿ ಬಿಸಿಲಿನ ಅತ್ಯಧಿಕ ತಾಪಮಾನ ಇರುವ ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಬಹುದು. ಎ.ಸಿ. ಹೆಲ್ಮೆಟ್‌ನ ಬ್ಯಾಟರಿಯು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಬಿಸಿಲು ಇರುವುದರಿಂದ ಕಲಬುರಗಿಯಲ್ಲಿ ಮೊದಲ ಬಾರಿಗೆ ಎ.ಸಿ. ಹೆಲ್ಮೆಟ್‌ ಪರಿಚಯಿಸಲಾಗಿದೆ’ ಎಂದು ಹೇಳಿದರು.

‘ಟ್ರಾಫಿಕ್ ಸಿಗ್ನಲ್, ಗಸ್ತಿನಲ್ಲಿರುವ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಕುಡಿಯುವ ನೀರು, ಮಜ್ಜಿಗೆ ಹಾಗೂ ಜ್ಯೂಸ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಗಸ್ತಿಗಾಗಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದರು.

ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.