
ಕಲಬುರಗಿ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸಿದವರ ಬಂಧನ ಖಂಡಿಸಿ ಎಐಕೆಕೆಎಂಸ್ ಹಾಗೂ ಎಐಯುಟಿಯುಸಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಐಕೆಕೆಎಂಸ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ. ಮಾತನಾಡಿ, ‘ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ನಡೆದ ಹೋರಾಟವನ್ನು ಹತ್ತಿಕ್ಕಲು 27 ಜನ ಹೋರಾಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನೀಯ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆ ಮುಂದೆ ಧರಣಿ ನಡೆಸಲು ಬಿಡದೆ ಹೋರಾಟಗಾರರನ್ನು ಬಂಧಿಸಿರುವುದು ಪ್ರಜಾತಾಂತ್ರಿಕಕ್ಕೆ ವಿರೋಧಿ ನಡೆಯಾಗಿದೆ’ ಎಂದರು.
‘ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಕುಗ್ಗಿಸಲು ಸರ್ಕಾರ ಅತ್ಯಂತ ಹೀನ ಕೆಲಸಕ್ಕೆ ಕೈ ಹಾಕಿದೆ. ಜನರನ್ನು ಭಯಭೀತರನ್ನಾಗಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹೋರಾಟಗಾರರಾದ ಭಗವಾನ ರಡ್ಡಿ, ಸಂಗನಬಸವ ಸ್ವಾಮೀಜಿ, ಅನಿಲ ಹೊಸಮನಿ, ಬೋಗೇಶ ಸೋಲಾಪುರ, ಸಿದ್ರಾಮ ಹಳ್ಳೂರ ಮತ್ತು ಅರವಿಂದ ಕುಲಕರ್ಣಿ ಸೇರಿದಂತೆ ಬಂಧಿಸಿರುವ ಎಲ್ಲ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಹೋರಾಟಗಾರರ ಮೇಲೆ ಹಾಕಿರುವ ಎಲ್ಲ ಸುಳ್ಳು ಕೇಸ್‌ಗಳನ್ನು ಹಿಂತೆಗೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಕೆಕೆಎಂಸ್ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಸಿಂಗೆ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಶರ್ಮಾ, ಮುಖಂಡರಾದ ಜಗನ್ನಾಥ್ ಎಸ್.ಎಚ್., ರಾಘವೇಂದ್ರ ಎಂ.ಜಿ., ರಮೇಶ ದೇವಕರ್, ಈಶ್ವರ ಕುಂಬಾರ, ಹರೀಶ ಸಂಗಾಣಿ, ಭೀಮಾಶಂಕರ್ ಆಂದೋಲಾ, ಶಂಕರ ಜಾಧವ್, ಅಮೃತ್ ಚವ್ಹಾಣ, ಶಂಬುಲಿಂಗ ಸರಡಗಿ, ಮಲ್ಲಿಕಾರ್ಜುನ ಬೈಂಡ್ಲರ್, ಭೀಮರಾಯ ಮುಕಡಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.