ADVERTISEMENT

ದತ್ತಾತ್ರೇಯ ಜಯಂತಿ: ತೊಟ್ಟಿಲಲ್ಲಿ ಬಾಲ ದತ್ತನ ಕಣ್ತುಂಬಿಕೊಂಡ ಭಕ್ತರು

ಭಕ್ತರ ಮಧ್ಯೆ ವೈಭವದ ದತ್ತಾತ್ರೇಯ ಜಯಂತಿ

ಶಿವಾನಂದ ಹಸರಗುಂಡಗಿ
Published 14 ಡಿಸೆಂಬರ್ 2024, 15:31 IST
Last Updated 14 ಡಿಸೆಂಬರ್ 2024, 15:31 IST
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ದತ್ತ ಜಯಂತಿ ನಿಮಿತ್ತ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಸೇರಿದ್ದ ಭಕ್ತಸ್ತೋಮ             ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ದತ್ತ ಜಯಂತಿ ನಿಮಿತ್ತ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಸೇರಿದ್ದ ಭಕ್ತಸ್ತೋಮ             ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌   

ಅಫಜಲಪುರ: ತಾಲ್ಲೂಕಿನ ‌ದೇವಲ ಗಾಣಗಾಪುರದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ದತ್ತ ಜಯಂತಿ ನಿಮಿತ್ತ ದತ್ತ ಮಹಾರಾಜರ ಬಾಲ ಮೂರ್ತಿಯ ತೊಟ್ಟಿಲು ಉತ್ಸವ ಸಂಭ್ರಮದಿಂದ ಜರುಗಿತು.

ಜಯಂತಿ ಅಂಗವಾಗಿ ಇಡೀ ದೇಗುಲವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಗರ್ಭಗುಡಿಯಲ್ಲಿ ಬಾಲ ದತ್ತನ ಮೂರ್ತಿಯನ್ನು ವಿಶೇಷ ಫಲ–ಪುಷ್ಪಗಳಿಂದ ಅಲಂಕರಿಸಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಹಾಗೂ ಕಾಕಡಾರುತಿ, ಅರ್ಚನೆ, ಭಜನೆ ಸೇವೆ ಸಲ್ಲಿಸಲಾಯಿತು. 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸಾಲಕಾರಿ ಪೂಜಾರಿ ಚೈತನ್ಯ ಪೂಜಾರಿ ಹಾಗೂ ಅರ್ಚಕರಾದ ಋಷಿಕೇಶ ಪೂಜಾರಿ, ಪ್ರಸಾದ ಪೂಜಾರಿ, ಕಿರಣ ಪೂಜಾರಿ, ವಲ್ಲಭ ಪೂಜಾರಿ, ಉದಯಭಟ್ ಪೂಜಾರಿ, ಪ್ರಖ್ಯಾತ ಪೂಜಾರಿ, ಆದಿತ್ಯ ಪೂಜಾರಿ, ಪ್ರಿಯಾಂಕ್ ಪೂಜಾರಿ, ಆದಿತ್ಯ ಪೂಜಾರಿ, ವಿಜಯ ಭಟ್, ಯೋಗೀಶ ಪೂಜಾರಿ ನೇತೃತ್ವದಲ್ಲಿ ತೊಟ್ಟಿಲು ಕಾರ್ಯಕ್ರಮ ನೆರವೇರಿತು.

ಜಯಂತಿ ಕಾರ್ಯಕ್ರಮ, ತೊಟ್ಟಿಲೋತ್ಸವ ಸೇರಿ ವಿವಿಧ ಕಾರ್ಯಕ್ರಮ ವೀಕ್ಷಣೆಗಾಗಿ ಧಾರ್ಮಿಕ ದತ್ತಿ ಇಲಾಖೆಯು ಎಲ್ಇಡಿ ಪರದೆಗಳನ್ನು ಅಳವಡಿಸಿತ್ತು. ಭಕ್ತರು ಕುಳಿತು ಕಾರ್ಯಕ್ರಮ ಕಣ್ತುಂಬಿಕೊಂಡರು. ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾತ್ರಿಕರು ಬೆಳಿಗ್ಗೆ 10 ಗಂಟೆಯಿಂದಲೇ ದೇವಸ್ಥಾನ ಎದುರು ಆಸನರಾಗಿದ್ದರು. ದತ್ತ ಮಹಾರಾಜರನ್ನು ತೊಟ್ಟಿಲಿಗೆ ಹಾಕುತ್ತಿದ್ದಂತೆ ದತ್ತ ಮಹಾರಾಜ್ ಕೀ ಜೈ ಎಂದು ದೇವಸ್ಥಾನದ ಮೇಲೆ ಹೂ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ADVERTISEMENT

ಭಕ್ತ ಸಾಗರ: ದತ್ತ ಜಯಂತಿ ನಿಮಿತ್ತ ಕಳೆದ ಒಂದು ವಾರದಿಂದ ರಾಜ್ಯ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ  ಯಾತ್ರಿಕರು ಬರುತ್ತಿರುವ ಹಿನ್ನೆಲೆಯಲ್ಲಿ ಅಫಜಲಪುರ, ಚೌಡಾಪೂರ, ಆನೂರ ಮಾರ್ಗದಲ್ಲಿ ಭಕ್ತರಿಗಾಗಿ ಅಲ್ಲಲ್ಲಿ ಹರಕೆ ಹೊತ್ತ ಭಕ್ತರು ಪ್ರಸಾದ ವಿತರಿಸಿದರು. ಮಹಾರಾಷ್ಟ್ರದ ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದರು.

ಸಂಗಮ ಪುಣ್ಯಸ್ನಾನ: ಇದಕ್ಕೂ ಮೊದಲು ಭಕ್ತರು ಭೀಮಾನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಈ ವರ್ಷ ಭೀಮಾ ನದಿಯಲ್ಲಿ ನೀರು ಸಾಕಷ್ಟಿರುವುದರಿಂದ ಭಕ್ತರಿಗೆ ಅನುಕೂಲವಾಯಿತು. ಗುರುಗಳ ಪಾದುಕಾ ದರ್ಶನಕ್ಕೆ ತೆರಳುವ ಮುನ್ನ ಯಾತ್ರಿಕರು ಸಂಗಮ (ಭೀಮಾ–ಅಮರ್ಜಾ) ಸ್ನಾನ ಮಾಡಿದರು. ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲದ ದರ್ಶನ ಪಡೆದರು. ನಿರ್ಗುಣ ಪಾದುಕೆ ಮತ್ತು ಅಶ್ವತ್ಥಕಟ್ಟೆ ದರ್ಶನ ಪಡೆದರು. ಪ್ರಾಂಗಣದಲ್ಲಿ ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆ, ಮಧುಕರಿ ಮತ್ತು ಅನ್ನದಾನ ಸೇವೆಗಳು ಜರುಗಿದವು.

‘ಸಂಗಮದಲ್ಲೇ ಭಕ್ತರಿಗೆ ಪುಣ್ಯಸ್ನಾನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಒಂದು ವಾರದಿಂದ ಭಕ್ತರು ಸಂಗಮಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಪಾರ್ಕಿಂಗ್, ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ’ ಎಂದುಸಂಗಮ ದೇವಸ್ಥಾನದ ವ್ಯಸ್ಥಾಪಕ ಮಡಿವಾಳಪ್ಪ ವಡಿಗೇರಿ ಮಾಹಿತಿ ನೀಡಿದರು.

ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ, ಜ್ಯೋತಿ ಪಾಟೀಲ, ಮಹಾದೇವ ಗುತ್ತೇದಾರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ದತ್ತು ನಿಂಬರಗಿ, ಸತೀಷ ರಜಪೂತ ದತ್ತನ ದರ್ಶನ ಪಡೆದರು.

ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಜೆ ನಾಲ್ಕು ಗಂಟೆವರೆಗೆ ಎಲ್ಲ ರಸ್ತೆಗಳು ವಾಹನಗಳಿಂದ ತುಂಬಿದ್ದವು. ಪ್ರಯಾಣಿಕರು ವಾಹನ ವ್ಯವಸ್ಥೆ ಇಲ್ಲದೆ ಪರದಾಡಿದರು.

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಜಯಂತಿ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಳವಡಿದ್ದ ಎಲ್‌ಇಡಿ ಪರದೆಯಲ್ಲಿ ದತ್ತನ ದರ್ಶನ ಪಡೆದ ಭಕ್ತರು

ಪುಣ್ಯಸ್ನಾನ ಮಾಡುವಾಗ ಬಟ್ಟೆಹಣ ಒಯ್ದ ಕಳ್ಳರು!

ಮುಂಬೈನಿಂದ ಬಂದಿದ್ದ ಬಂದಿದ್ದ ಪರಸಪ್ಪ ಸಗಾಯಿ ಎಂಬುವವರು ಸಂಗಮ ಕ್ಷೇತ್ರದಲ್ಲಿ ಸ್ನಾನ ಮಾಡುವಾಗ ಕಳ್ಳರು ಅವರ ಬಟ್ಟೆ ಜತೆಗೆ ಹಣ ಮೊಬೈಲ್ ಕಾರ್ ಕೀಲಿ ದೋಚಿದ್ದರಿಂದ ಬಟ್ಟೆ ಇಲ್ಲದೇ ಪರದಾಡಿ ಕಣ್ಣೀರು ಹಾಕಿದರು. ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರದಾಡಿದ ಯಾತ್ರಿಕರು: ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ ಹಾಗೂ ಬಸ್ ನಿಲ್ದಾಣ ಸಣ್ಣದಾಗಿರುವುದರಿಂದ ಬಸ್‌ಗಳು ರಸ್ತೆ ಮೇಲೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಭಕ್ತರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ದೇವಸ್ಥಾನ ಬೀದಿಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಗೂಡಂಗಡಿಗಳನ್ನು ಹಾಕಿದ್ದರಿಂದ ಭಕ್ತರಿಗೆ ತೊಂದರೆಯಾದರೂ ಪೋಲಿಸ್ ಇಲಾಖೆ ಮೌನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.