ADVERTISEMENT

ಕಲೆ, ಸಾಹಿತ್ಯದಿಂದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಳ: ಪ್ರೊ.ಆರ್.ಆರ್. ಬಿರಾದಾರ

ಕಸಾಪ ಜಿಲ್ಲಾ ಘಟಕದಿಂದ ದೃಶ್ಯಕಲಾ ಸಿರಿ ಕೃತಿ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:48 IST
Last Updated 12 ಅಕ್ಟೋಬರ್ 2025, 4:48 IST
ಕಲಬುರಗಿಯ ಕನ್ನಡ ಭವನದಲ್ಲಿ ದೃಶ್ಯಕಲಾ ಸಿರಿ ಕೃತಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು
ಕಲಬುರಗಿಯ ಕನ್ನಡ ಭವನದಲ್ಲಿ ದೃಶ್ಯಕಲಾ ಸಿರಿ ಕೃತಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು   

ಕಲಬುರಗಿ: ‘ದೇಶದಲ್ಲಿ ಕಲೆ, ಸಾಹಿತ್ಯ, ಸಂಗೀತ ಮತ್ತು ಇತಿಹಾಸಗಳು ಮುಖ್ಯ. ಸೃಜನಶೀಲ ಭಾವನೆಗಳನ್ನು ಕಲೆ, ಸಾಹಿತ್ಯ, ಸಂಗೀತಗಳ ಮೂಲಕ ಅಭಿವ್ಯಕ್ತಪಡಿಸಬಹುದು. ಇದರಿಂದ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸುವ ಮತ್ತು ಸಂಸ್ಕೃತಿ ಸಂಸ್ಕಾರ ಇನ್ನಷ್ಟು ಶ್ರೀಮಂತವಾಗಿಸಲು ಸಾಧ್ಯ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಕಲಾವಿದ ರೆಹಮಾನ್ ಪಟೇಲ್ ಅವರ ಸಂಪಾದಕತ್ವದ ಈ ಭಾಗದ ಚಿತ್ರಕಲಾವಿದರ ಪರಿಚಯಾತ್ಮಕ ದೃಶ್ಯಕಲಾ ಸಿರಿ ಕೃತಿಯನ್ನು ಶನಿವಾರ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ., ‘ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸ ಪರಂಪರೆಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ. ನಮ್ಮ ಮಾಹಿತಿ ಆಯೋಗದಿಂದ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದೇವೆ. ಮಾತೃ ಭಾಷೆ ನಿರಂತರವಾಗಿ ಅಳವಡಿಸಿಕೊಂಡು ಬೆಳೆಸಬೇಕಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಇಂದಿನ ಹೊಸ ಪೀಳಿಗೆಯನ್ನು ಸಾಹಿತ್ಯದತ್ತ ಆಕರ್ಷಿತರಾಗುವಂತೆ ಪ್ರೇರಣೆ ಕೊಡುವ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಪರಿಷತ್ತು ಮಾಡುತ್ತಿದೆ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ  ಜೆ.ಎಸ್. ಖಂಡೇರಾವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೃತಿ ಸಂಪಾದಕ ರೆಹಮಾನ್ ಪಟೇಲ್, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜೀರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು. ಚಿತ್ರಕಲಾವಿದ ಮಹ್ಮದ್ ಅಯಾಜೋದ್ದೀನ್ ಪಟೇಲ್ ಕೃತಿ ಪರಿಚಯಿಸಿದರು.

ಪ್ರಮುಖರಾದ ಡಾ. ಬಿ.ಎ. ಪಾಟೀಲ, ಸಿದ್ಧಲಿಂಗ ಬಾಳಿ, ಅಮೃತಪ್ಪ ಅಣೂರ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.