
ಕಲಬುರಗಿ: ತಾಲ್ಲೂಕಿನ ಕೆಸರಟಗಿ ಗ್ರಾಮದ ಹತ್ತಿರವಿರುವ ಆಶ್ರಯ ಕಾಲೊನಿಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು. ನಾಗರಿಕ ಸೌಲಭ್ಯ ಒದಗಿಸಬೇಕು ಮತ್ತು ಸಂಪರ್ಕ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸಿಟಿಜನ್ ಫೋರಂ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಆಶ್ರಯ ಕಾಲೊನಿಯಲ್ಲಿ ಸುಮಾರು 102 ಮನೆಗಳಲ್ಲಿ 492 ಮಂದಿ ಕಳೆದ ಹತ್ತು ವರ್ಷಗಳಿಂದ ಮೂಲಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಹಾಳಾಗಿದ್ದ ಮನೆಗಳನ್ನು ಸ್ವಯಂ ದುರಸ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದರೂ ಇಂದಿಗೂ ಹಕ್ಕುಪತ್ರ ವಿತರಣೆ ಆಗಿಲ್ಲ ಎಂದು ನಿವಾಸಿಗಳು ಆರೋಪಿಸಿದರು.
ಮನೆಗಳಿಗೆ ಅಧಿಕೃತ ಸಂಖ್ಯೆ ಇಲ್ಲದ ಕಾರಣ ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಸಂಪರ್ಕ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳ ಕೊರತೆಯಿಂದ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ನಿವಾಸಿಗಳ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಸಂಚಾಲಕ ಎಂ.ಬಿ.ಸಜ್ಜನ್, ಉಪಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ದೇವು ಬಿರಾದಾರ, ಜಾವೀದ್ ಹುಸೇನ್, ನಾಗಯ್ಯ ಸ್ವಾಮಿ, ಅಶ್ವಿನಿ, ಸೈಯದ್ ಹುಸೇನ್, ಮೋಹನ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.