ADVERTISEMENT

ಕಲಬುರಗಿ: ಮದ್ಯದ ಹಣ ಕೇಳಿದ್ದಕ್ಕೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:39 IST
Last Updated 27 ಅಕ್ಟೋಬರ್ 2025, 5:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ಕುಡಿದ ಮದ್ಯದ ಹಣ ಕೊಡುವಂತೆ ಕೇಳಿದ ಬಾರ್‌ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಫಿಲ್ಟರ್‌ಬೆಡ್ ಅಭಿಶೇಕ ಆಗಾಗ ಬಾರ್‌ಗೆ ಬಂದು ಉಪಟಳ ನೀಡುತ್ತಾನೆ. ಅ. 24ರಂದು ರಾತ್ರಿ 10.30ರ ಹೊತ್ತಿಗೆ ಬಂದು ಮದ್ಯ ಕುಡಿದ. ಹಣ ಕೇಳಿದಾಗ ‘ನಾನು ಡಾನ್ ಇದ್ದೇನೆ. ನನಗೆ ಬೇಕಾದಾಗ ಬಂದು ಮದ್ಯ ಕುಡಿಯುತ್ತೇನೆ, ನೀನು ಕೊಡಬೇಕು. ಇಲ್ಲದಿದ್ದರೆ ಜೀವಂತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ. ಜೊತೆಗೆ ಎದೆ ಮೇಲಿನ ಅಂಗಿ ಹಿಡಿದು ಎಳೆದಾಡಿ ಒದ್ದು ಹಲ್ಲೆ ನಡೆಸಿದ್ದಾನೆ’ ಎಂದು ಸುಲ್ತಾನಪುರ ಕ್ರಾಸ್‌ ಹತ್ತಿರದ ತ್ರಿಶೂಲ್‌ ಬಾರ್‌ ಅಂಡ್‌ ರೆಸ್ಟೋರಂಟ್‌ನ ಮ್ಯಾನೇಜರ್‌ ರಾಘವೇಂದ್ರ ಬಳೂಂಡಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನನ್ವಯ ಸಬರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವರದಕ್ಷಿಣೆ ಕಿರುಕುಳ: ಆರೋಪ

ಕಲಬುರಗಿ: ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟ ಆರೋಪದಡಿ ನೊಂದ ಮಹಿಳೆಯರಿಬ್ಬರು ನಗರ ಮಹಿಳಾ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.

‘ಮದುವೆಯಾದ ಕೆಲವು ತಿಂಗಳ ನಂತರ ₹3 ಲಕ್ಷ ವರದಕ್ಷಿಣೆ ತರಬೇಕು. ಇಲ್ಲದಿದ್ದರೆ ಬೇರೆಯವರನ್ನು ನಾನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಐದಾರು ತಿಂಗಳ ಹಿಂದೆ ಪತಿ ನಾಪತ್ತೆಯಾಗಿದ್ದ. ಇತ್ತೀಚೆಗೆ ಕಲಬುರಗಿಯ ಹುಮನಾಬಾದ್‌ ರಿಂಗ್‌ ರಸ್ತೆಯ ಕಸ್ತೂರಿ ಹೋಟೆಲ್‌ ಸಮೀಪದ ಮನೆಯೊಂದರಲ್ಲಿ ಆತ ಪತ್ತೆಯಾಗಿದ್ದ. ಆಗ ನನ್ನೊಂದಿಗೆ ಜೀವನ ನಡೆಸಬೇಕು ಇಲ್ಲವೇ ಜೀವನೋಪಾಯಕ್ಕೆ ಪರಿಹಾರ ನೀಡುವಂತೆ ನಾನು ಕೇಳಿದಾಗ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಪೊಲೀಸರಿಗೆ ದೂರು ಕೊಟ್ಟರೆ ನನ್ನ ಹಾಗೂ ನನ್ನ ತವರು ಮನೆಯವರನ್ನು ಜೀವಂತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ನೊಂದ ಮಹಿಳೆ, ತಾಜಸುಲ್ತಾನಪುರ ನಿವಾಸಿ ದಿವ್ಯಾರಾಣಿ ಗೊಬ್ಬೂರಕರ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ‘₹5 ಲಕ್ಷ ವರದಕ್ಷಿಣೆ ತರುವ ತನಕ ನಮ್ಮ ಮನೆಗೆ ಬರಬೇಡ ಎಂದು ಪತಿ ನನ್ನನ್ನು ತವರು ಮನೆಗೆ ಬಿಟ್ಟು ಹೋಗಿದ್ದಾನೆ. ಮನೆಗೆ ಬಂದರೆ ಜೀವ ಸಹಿತ ಬಿಡಲ್ಲ ಎಂದು ಜೀವಬೆದರಿಕೆ ಹಾಕಿದ್ದಾನೆ’ ಎಂದು ಆರೋಪಿಸಿ ನೊಂದ ಮಹಿಳೆ, ನೂರಾನಿ ಮೊಹಲ್ಲಾ ನಿವಾಸಿ ಸಬಾಅಂಜುಮ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.