
ಕಲಬುರಗಿ: ದೇಶದ ಅತಿ ದೊಡ್ಡ ಪ್ರಾಚೀನ ತೋಪನ್ನು ಹೊಂದಿರುವ ಕಲಬುರಗಿಯ ಬಹಮನಿ ಕೋಟೆಯ ಅಭಿವೃದ್ಧಿ ಮಾಡುವ ಕುರಿತು ಒಂದು ವಾರದೊಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಸದನದಲ್ಲಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ವಿಧಾನಮಂಡಲ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ‘ಕಲಬುರಗಿ ಕೋಟೆಯಲ್ಲಿ ಅತ್ಯಂತ ಬೃಹತ್ ತೋಪು ಇದ್ದು, ಅದನ್ನು ಸಂರಕ್ಷಣೆ ಮಾಡಬೇಕು. ಕೋಟೆಯ ಸುತ್ತಲೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪ್ರವಾಸಿಗರು ಬರುವಂತೆ ಕೋಟೆಯನ್ನು ರೂಪಿಸಬೇಕು. ಬಾರಾ ಗಜ್ ಕಾ ತೋಪು ಎಂದು ಹೆಸರಾದ ತೋಪನ್ನು ಗಿನ್ನೆಸ್ ದಾಖಲೆಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಎಚ್.ಕೆ. ಪಾಟೀಲ, ‘ತಿಪ್ಪಣ್ಣಪ್ಪ ಅವರು ಬಹಳ ಮಹತ್ವದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಕೋಟೆಯನ್ನು ರಕ್ಷಣೆ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗುವುದು. ಹಣಕಾಸಿನ ಅಗತ್ಯ ಬಿದ್ದರೆ ಪ್ರಾಚ್ಯಶಾಸ್ತ್ರ ಇಲಾಖೆಯಿಂದ ಕೊಡುವ ವ್ಯವಸ್ಥೆ ಮಾಡಲಾಗುವುದು. ಕೋಟೆಯ ರಕ್ಷಣೆ ಹಾಗೂ ಅಭಿವೃದ್ಧಿಗೆ ಏನು ಮಾಡಬಹುದು ಎಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಲಾಗುವುದು’ ಎಂದರು.
ಕೋಟೆ ವೀಕ್ಷಣೆ ಮೊಟಕುಗೊಳಿಸಿದ್ದ ವಿದೇಶಿಯರು
ಐತಿಹಾಸಿಕ ಬಹಮನಿ ಕೋಟೆ ನೋಡಲು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಅಮೆರಿಕ ಹಾಗೂ ಇಂಗ್ಲೆಂಡ್‌ನ 28 ಪ್ರವಾಸಿಗರಿಗೆ ಕೋಟೆಯಲ್ಲಿ ಸರಿಯಾದ ನಡಿಗೆ ಪಥ ಇಲ್ಲದಿರುವುದು ರಸ್ತೆಯಲ್ಲೇ ನೀರು ಹರಿದಿರುವುದು ಇರುಸು ಮುರುಸು ಉಂಟು ಮಾಡಿತ್ತು. ಅಲ್ಲದೇ ಬೃಹತ್ ಗಾತ್ರದ ತೋಪು ವೀಕ್ಷಣೆಗೆ ಹೋಗುವ ದಾರಿ ಸಮರ್ಪಕವಾಗಿಲ್ಲದ್ದರಿಂದ ಬಹುತೇಕ ಹಿರಿಯ ನಾಗರಿಕರಿದ್ದ ತಂಡ ತೋಪು ವೀಕ್ಷಿಸದೇ ವಾಪಸಾಗುತ್ತದೆ.
ಈ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ಬಿಜೆಪಿಯು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ‘ಕಲಬುರಗಿ ನಗರದ ಸ್ಮಾರಕಗಳ ವೀಕ್ಷಣೆಗೆ ತೆರಳಲು ಉತ್ತಮ ರಸ್ತೆಗಳೇ ಇಲ್ಲ ಎಲ್ಲೆಡೆ ಕೊಳಚೆ ಕಸ ಅಸಹ್ಯ ಸ್ಥಿತಿ ಇರುವುದರಿಂದಾಗಿ ವಿದೇಶಿ ಪ್ರವಾಸಿಗರು ಸ್ಮಾರಕ ವೀಕ್ಷಿಸದೆ ನಿರಾಸೆಯಿಂದ ವಾಪಸ್ ಹೋಗಿರುವುದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಇದು ಕಲಬುರಗಿ ಇತಿಹಾಸಕ್ಕೆ ಮಾಡಿದ ಅವಮಾನ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರ ಕಡೆಗಣನೆಯಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ’ ಎಂದು ಟೀಕಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.