ADVERTISEMENT

ಕಲಬುರಗಿ ಸ್ತಬ್ಧ: ಸಾವಿರಾರು ಸಂಖ್ಯೆಯಲ್ಲಿ ನಗರದತ್ತ ಬರುತ್ತಿರುವ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 7:12 IST
Last Updated 24 ಡಿಸೆಂಬರ್ 2024, 7:12 IST
   

ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ‌ವಿವಿಧ ದಲಿತ, ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಕರೆ ನೀಡಿರುವ ಕಲಬುರಗಿ ಬಂದ್ ಪರಿಣಾಮ ನಗರ ಸ್ತಬ್ಧವಾಗಿದೆ.

ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ನಗರದ ಜೇವರ್ಗಿ ರಸ್ತೆ, ಸೇಡಂ ರಸ್ತೆ, ಹುಮನಾಬಾದ್ ರಸ್ತೆ, ಆಳಂದ ಹಾಗೂ ಅಫಜಲಪುರದಿಂದ ನಗರಕ್ಕೆ ಸೇರುವ ರಸ್ತೆಗಳ ಮೇಲೆ ದಿಗ್ಬಂಧನ ವಿಧಿಸಿದ್ದರಿಂದ ನಗರದ ಹೊರಭಾಗದಲ್ಲಿಯೇ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

ಅವರನ್ನು ಕರೆತರಲು ಸಂಬಂಧಿಕರು ಬೈಕ್, ಕಾರಿನಲ್ಲಿ ಹೋಗಲು ಮುಂದಾದರೂ ಪ್ರತಿಭಟನಾಕಾರರು ಅನುಮತಿಸಲಿಲ್ಲ. ಇದರಿಂದ ಅನಿವಾರ್ಯವಾಗಿ ನಡೆದುಕೊಂಡೇ ಮನೆಯತ್ತ ಸಾಗಿದರು.

ADVERTISEMENT

ನಗರದ‌ ಹೊರವಲಯದ ನಾಗನಹಳ್ಳಿ ಕ್ರಾಸ್ ಬಳಿ ಪ್ರತಿಭಟನಾಕಾರರ ಸೂಚನೆ ಮೀರಿ ಲಾರಿ ಮುಂದಕ್ಕೆ ಒಯ್ಯಲು ಮುಂದಾದ ಚಾಲಕನ ಮೇಲೆ ಯುವಕರ ಗುಂಪೊಂದು ನೀರಿನ ಬಾಟಲಿ ಎಸೆಯಿತು.

ನಗರದ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳ ಮೂಲಕ ಕಲಬುರಗಿಗೆ ಬರುತ್ತಿದ್ದಾರೆ.

ನಗರದ ಹೀರಾಪುರ ಕ್ರಾಸ್, ಜಗತ್ ವೃತ್ತ, ಸರ್ದಾರ್ ಪಟೇಲ್ ವೃತ್ತ, ರಾಮ ಮಂದಿರ ವೃತ್ತದಲ್ಲಿ ‌ನೂರಾರು‌ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿದ್ದು, ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಆಂಬುಲೆನ್ಸ್ ಸೇರಿದಂತೆ ಇತರ ತುರ್ತು ವಾಹನಗಳಿಗೆ ಮಾತ್ರ ದಾರಿ ಬಿಡಲಾಗುತ್ತಿದೆ.

ಸಾರಿಗೆ ಬಸ್, ಖಾಸಗಿ ವಾಹನಗಳ ಸಂಚಾರ ಬಹುತೇಕ ಸ್ತಬ್ಧಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.