ಕಲಬುರಗಿ: ಇಲ್ಲಿನ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯ ಹಾಲು ಪೂರೈಕೆದಾರರಿಗೆ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ನೀಡುವ ಪ್ರೋತ್ಸಾಹಧನ 2024ರ ನವೆಂಬರ್‌ನಿಂದ ಬಿಡುಗಡೆಯೇ ಆಗಿಲ್ಲ. ಇದರಿಂದ ಈ ಭಾಗದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟದಡಿ 453 ಕಾರ್ಯನಿರತ ಹಾಲು ಉತ್ಪಾದಕರ ಸಂಘಗಳಿದ್ದು, ಒಟ್ಟು 10,500ಕ್ಕೂ ಹೆಚ್ಚು ಹೈನುಗಾರರು ಈ ಒಕ್ಕೂಟಕ್ಕೆ ಹಾಲು ಒದಗಿಸುತ್ತಿದ್ದಾರೆ. ಇದರಲ್ಲಿ ರೈತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಒಕ್ಕೂಟ ವ್ಯಾಪ್ತಿಯ ಸಾಮಾನ್ಯ ವರ್ಗ, ಎಸ್ಸಿ, ಎಸ್ಟಿ ಸಮುದಾಯದ ಹಾಲು ಪೂರೈಕೆದಾರರಿಗೆ 2024ರ ನವೆಂಬರ್‌ನಿಂದ 2025ರ ಫೆಬ್ರುವರಿ ಅಂತ್ಯದ ತನಕದ ₹3.82 ಕೋಟಿ ಪ್ರೋತ್ಸಾಹಧನ ಪಾವತಿಯಾಗಿಲ್ಲ. ಮಾರ್ಚ್ ತಿಂಗಳ ಲೆಕ್ಕಾಚಾರವೂ ಸೇರಿದರೆ ಬಾಕಿ ಮೊತ್ತ ₹4.50 ಕೋಟಿಯಷ್ಟಾಗುತ್ತದೆ.
ರಾಜ್ಯ ಸರ್ಕಾರ ಕ್ಷೀರ ಉತ್ಪಾದನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಪೂರೈಕೆದಾರರಿಗೆ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಅದು ನಿಯಮಿತವಾಗಿ ಹೈನುಗಾರರಿಗೆ ತಲುಪದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ.
‘ರಾಜ್ಯ ಸರ್ಕಾರ ನಿಯಮಿತವಾಗಿ ಪ್ರೋತ್ಸಾಹಧನ ವಿತರಿಸದ ಕಾರಣ ಹೈನುಗಾರಿಕೆ ನಡೆಸುವುದೇ ಕಷ್ಟವಾಗಿದೆ. ಬೇಸಿಗೆಯಲ್ಲಿ ಸಹಜವಾಗಿ ಹಸಿ ಮೇವು ಕಡಿಮೆಯಾಗುತ್ತದೆ. ಹಾಲಿನ ಇಳುವರಿಯೂ ತಗ್ಗುತ್ತದೆ. ಹಿಂಡಿ, ಒಣಮೇವಿಗೆ ಮಾಡುವ ವೆಚ್ಚ ಹೆಚ್ಚಾಗುತ್ತದೆ. ಸಕಾಲಕ್ಕೆ ಪ್ರೋತ್ಸಾಹಧನ ಬರದ ಕಾರಣ ಹಿಂಡಿ, ಮೇವು ಖರೀದಿಗೆ ಕೈಯಿಂದ ಹಣ ಹಾಕುವಂತಾಗಿದೆ. ಐದಾರು ತಿಂಗಳು ಹಣ ಬರದಿದ್ದರೆ ಎಷ್ಟಂಥ ಕೈಯಿಂದ ಹಣ ಹೊಂದಿಸಲು ಸಾಧ್ಯ? ಹೈನುಗಾರಿಕೆ ಲಾಭದ ಬದಲಿಗೆ ನಷ್ಟದತ್ತ ವಾಲುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೈತರೊಬ್ಬರು ಅಳಲುತೋಡಿಕೊಂಡರು.
‘ನಾನು ತಿಂಗಳಿಗೆ 2,300 ಲೀಟರ್‌ಗೂ ಅಧಿಕ ಹಾಲು ಹಾಕುತ್ತೇನೆ. ಲೆಕ್ಕದಂತೆ ನನಗೆ ₹11,500 ಪ್ರೋತ್ಸಾಹಧನ ಬರಬೇಕು. ಹಾಲಿನ ಪ್ರಮಾಣ ಬೇಸಿಗೆಯಲ್ಲಿ ಕುಸಿದರೆ, ಮಳೆಗಾಲದಲ್ಲಿ ಹೆಚ್ಚುತ್ತದೆ. ಪ್ರತಿ ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಪ್ರೋತ್ಸಾಹಧನ ನೀಡಿದರೆ, ನಾವು ಹಾಕುವ ಹಾಲಿನ ಲೆಕ್ಕ ಇಟ್ಟುಕೊಂಡು ಬರುವ ಹಣಕ್ಕೆ ಸರಿದೂಗಿಸಿಕೊಂಡು ನೋಡಬಹುದು. ಐದಾರು ತಿಂಗಳ ಹಣ ಬಾಕಿ ಉಳಿಸಿಕೊಂಡರೆ ಯಾವ ತಿಂಗಳು ಎಷ್ಟು ಹಾಲು ಹಾಕಿದ್ದೇವೆ, ಅದರಲ್ಲಿ ಗುಣಮಟ್ಟದ ಹಾಲು ಎಷ್ಟಿತ್ತು ಎಂದು ಹೇಗೆ ಲೆಕ್ಕಹಾಕುವುದು? ಸರ್ಕಾರ ಎಷ್ಟು ಹಣ ಕೊಡುತ್ತೋ ಅಷ್ಟೇ ನಮ್ಮದು ಎನ್ನುವಂತಾಗಿದೆ’ ಎಂದು ಮತ್ತೊಬ್ಬ ಹಾಲು ಉತ್ಪಾದಕ ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಹಾಲಿನ ಬಿಲ್‌ಗೂ ಹೈನುಗಾರಿಕೆ ವೆಚ್ಚಕ್ಕೂ ಸರಿಹೊಂದುತ್ತದೆ. ಲಾಭವಾಗಿ ಉಳಿಯುವುದು ಬರೀ ಪ್ರೋತ್ಸಾಹಧನವಷ್ಟೇ. ಅದನ್ನೂ ಐದಾರು ತಿಂಗಳು ಬಾಕಿ ಉಳಿಸಿಕೊಂಡರೆ ಬದುಕುವುದು ಹೇಗೆ?ರಾಚಣ್ಣ ಬೆಡಜುರ್ಗಿ ಹಾಲು ಉತ್ಪಾದಕ ಹಳ್ಳಿಸಲಗರ ಆಳಂದ ತಾಲ್ಲೂಕು
ಕಲಬುರಗಿಗೆ ಮೇಗಾ ಡೈರಿ ಮಂಜೂರಾಗಿದ್ದು ಈ ಸಂಬಂಧ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವ ವೇಳೆ ಪ್ರೋತ್ಸಾಹಧನ ಬಿಡುಗಡೆಗೂ ಮನವಿ ಮಾಡಲಾಗುವುದುಆರ್.ಕೆ.ಪಾಟೀಲ ಅಧ್ಯಕ್ಷ ಕಲಬುರಗಿ ಬೀದರ್ ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.