ADVERTISEMENT

ಕಲಬುರಗಿ: ಅನರ್ಹರ 10,761 ಬಿಪಿಎಲ್ ಪಡಿತರ ಚೀಟಿ ಎಪಿಎಲ್‌ಗೆ

ಓಂಕಾರ ಬಿರಾದಾರ
Published 22 ಡಿಸೆಂಬರ್ 2025, 6:52 IST
Last Updated 22 ಡಿಸೆಂಬರ್ 2025, 6:52 IST
ರೇಷನ್ ಕಾರ್ಡ್ ಸಾಂದರ್ಭಿಕ ಚಿತ್ರ
ರೇಷನ್ ಕಾರ್ಡ್ ಸಾಂದರ್ಭಿಕ ಚಿತ್ರ   

ಕಲಬುರಗಿ: ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ 10,761 ಅನರ್ಹ ಕಾರ್ಡ್‌ಗಳನ್ನು ಪತ್ತೆ ಮಾಡಿ ಅಂತ್ಯೋದಯ ಹಾಗೂ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ.

ಕಳೆದ ಸೆಪ್ಟೆಂಬರ್‌ 1ರಿಂದ ಅಂತ್ಯೋದಯ ಹಾಗೂ ಬಿಪಿಎಲ್‌ ಅನರ್ಹ ಕಾರ್ಡ್‌ ಪತ್ತೆ ಹಚ್ಚುವ ಕಾರ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮಾಡುತ್ತಿದ್ದು, ಮೂರು ತಿಂಗಳ ಅವಧಿಯಲ್ಲಿ 1,216 ಅಂತ್ಯೋದಯ ಹಾಗೂ 9,545 ಬಿಪಿಎಲ್‌ ಅನರ್ಹ ಕಾರ್ಡ್‌ಗಳನ್ನು ಪತ್ತೆ ಮಾಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 1ರ ಪ್ರಕಾರ ಅಂತ್ಯೋದಯ ಹಾಗೂ ಬಿಪಿಎಲ್‌ ಸೇರಿ 5,78,558 ರೇಷನ್‌ ಕಾರ್ಡ್‌ಗಳಿದ್ದವು. ಡಿಸೆಂಬರ್‌ 12ಕ್ಕೆ ಕೊನೆಗೊಂಡಂತೆ 60,548 ಅಂತ್ಯೋದಯ ಹಾಗೂ 5,07,249 ಬಿಪಿಎಲ್‌ ಕಾರ್ಡ್‌ಗಳಿದ್ದು, ಒಟ್ಟು 5,67,797 ಕಾರ್ಡ್‌ದಾರರು ಇದ್ದಾರೆ.

ADVERTISEMENT

ಯಾರು ಅನರ್ಹರು: ಕೇಂದ್ರ ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ವಾರ್ಷಿಕ ಆದಾಯ ಮಿತಿ ₹ 1.20 ಲಕ್ಷಕ್ಕೂ ಅಧಿಕ ಇರುವವರು, 3.5 ಹೆಕ್ಟೇರ್‌ಗಿಂತಲೂ ಅಧಿಕ ಜಮೀನು ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು, ₹ 5 ಲಕ್ಷಗಿಂತ ಹೆಚ್ಚು ಜಿಎಸ್ಟಿ ವಹಿವಾಟು, ಎಲ್‌ಎಂವಿ (ಕಾರು) ವಾಹನ ಉಳ್ಳವರು, ಸರ್ಕಾರಿ ಉದ್ಯೋಗಿಗಳು, ನಗರ ಪ್ರದೇಶದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರು ಕಾರ್ಡ್‌ ಪಡೆಯಲು ಅರ್ಹರಲ್ಲ.

ಇನ್ನೂ ಅನರ್ಹ ಕಾರ್ಡ್‌ ರದ್ದು ಸಾಧ್ಯತೆ: ‘ಐಟಿಆರ್ ರಿಟರ್ನ್‌ ಫೈಲ್ ಮಾಡಿದ ಡೇಟಾದ ಆಧಾರದ ಮೇಲೆ ಜಿಲ್ಲೆಯಲ್ಲಿ ಇನ್ನೂ 10 ಸಾವಿರ ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷದ ಐಟಿಆರ್‌ನಲ್ಲಿ ಹೆಚ್ಚಿನ ಆದಾಯ ಕಂಡು ಬಂದಿದ್ದರಿಂದ ಕಾರ್ಡ್‌ಗಳು ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

ಹೊಸ ಕಾರ್ಡ್‌ಗೆ ಕಾಯುತ್ತಿರುವ ಜನ: ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಿ 2023ರ ಸೆಪ್ಟೆಂಬರ್‌ ತಿಂಗಳಿಂದ ಜನರು ಕಾಯುತ್ತಿದ್ದಾರೆ. ಆದರೆ ಈವರೆಗೂ ಕಾರ್ಡ್‌ ವಿತರಣೆಗೆ ಸರ್ಕಾರ ಮುಂದಾಗುತ್ತಿಲ್ಲ. ಕುಟುಂಬದಿಂದ ಪ್ರತ್ಯೇಕಗೊಂಡವರು, ಹೊಸ ಜೀವನ ನಡೆಸುವವರು ಅರ್ಜಿ ಸಲ್ಲಿಸಿದರೂ ಅವಕಾಶ ಸಿಕ್ಕಿಲ್ಲ. ಇನ್ನೂ ಕೆಲವರು ಹೊಸ ಅರ್ಜಿ ಸಲ್ಲಿಸಬೇಕು ಎಂದರೂ ಸಾಧ್ಯವಾಗುತ್ತಿಲ್ಲ.

‘ಅರ್ಹರ ಕಾರ್ಡ್‌ ರದ್ದಾಗಿದ್ದರೆ ಅರ್ಜಿ ಸಲ್ಲಿಸಿ’

‘ಸರ್ಕಾರದ ನಿರ್ದೇಶನದಂತೆ ಅನರ್ಹ 10761 ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ಅರ್ಹ ಫಲಾನುಭವಿಗಳ ಕಾರ್ಡ್‌ ಒಂದು ವೇಳೆ ರದ್ದಾಗಿದ್ದರೆ ತಹಶೀಲ್ದಾರ್‌ ಬಳಿ ಅರ್ಜಿ ಸಲ್ಲಿಸಿ ಮರಳಿ ಪಡೆಯಲು ಅವಕಾಶವಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಮುನಾವರ್ ದೌಲಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಐಟಿಆರ್‌ ರಿಟರ್ನ್‌ ಪೈಲ್‌ ಆಧಾರದಲ್ಲಿ ನಮೂದಾದ ಆದಾಯವನ್ನು ಪರಿಗಣಿಸಿ 1.20 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿದ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ. ಹಿಂದೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆದ್ಯತೆ ಆಧಾರದ ಮೇಲೆ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.