
ಕಲಬುರಗಿ: ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ದುಷ್ಕರ್ಮಿಗಳು ಹೊರಗಿನಿಂದ ಸ್ಮಾರ್ಟ್‌ಫೋನ್‌ಗಳು, ಸಿಗರೇಟ್ ಪ್ಯಾಕೆಟ್‌ಗಳು, ಬೀಡಿ ಕಟ್ಟುಗಳು, ಬೆಂಕಿ ಪೊಟ್ಟಣಗಳು ಹಾಗೂ ಎರಡು ದೊಣ್ಣೆಗಳನ್ನು ಜೈಲಿನೊಳಗೆ ಎಸೆಯಲು ಯತ್ನಿಸಿದ್ದಾರೆ.
ಒಂದು ಪ್ರಕರಣದಲ್ಲಿ ಜ.12ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ವ್ಯಕ್ತಿಯೊಬ್ಬ ಒಂದು ಉಂಡೆ ಆಕಾರ ಚೆಂಡಿನಂಥ ವಸ್ತುವನ್ನು ಎಸೆಯಲು ಯತ್ನಿಸಿದ್ದ. ಇದನ್ನು ಕೆಎಸ್‌ಐಎಸ್‌ಎಫ್ ಪಡೆಯ ಸಿಬ್ಬಂದಿ ತಡೆದಿದ್ದಾರೆ. ಜೊತೆಗೆ ಆ ವಸ್ತುಗಳನ್ನು ಎಸೆಯಲು ಯತ್ನಿಸಿದ ವ್ಯಕ್ತಿ ಹಾಗೂ ಆತನ ನೆರವಿಗೆ ಬಂದಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಚಂಡಿನಂಥ ಉಂಡೆಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು, 3 ಪ್ಯಾಕೆಟ್ ಸಿಗರೇಟ್, 10 ಕಟ್ಟು ಬೀಡಿ ಹಾಗೂ ಬೆಂಕಿಪೊಟ್ಟಣಗಳು ದೊರೆತಿವೆ’ ಎಂದು ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ಶರಣಬಸವ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜ.12ರಂದು ರಾತ್ರಿ 10.50ರ ಹೊತ್ತಿಗೆ ಜೈಲಿನ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವೆ ಮೂವರು ವ್ಯಕ್ತಿಗಳು ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಟಿ.ಪಿ.ಶೇಷ ಭೇಟಿ: ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಕಾರಾಗೃಹಗಳ ಇಲಾಖೆಯ ಡಿಐಜಿ ಟಿ.ಪಿ.ಶೇಷ ಅವರು ಭೇಟಿ ನೀಡಿ ಪರಿಶೀಲಿಸಿದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.