ಕಲಬುರಗಿ ಜಿಲ್ಲೆಯ ಚಂದ್ರಂಪಳ್ಳಿ ಸೇತುವೆ ಜಲಾವೃತವಾಗಿರುವುದು
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಎಲ್ಲೆಡೆ ಪ್ರವಾಹ ಉಂಟಾಗಿದೆ. ಇದರಿಂದ ಹಲವು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿದುಕೊಂಡಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕಗೂ ಅಧಿಕ ಒಳ ಹರಿವಿದ್ದು ಮೂರು ಗೇಟುಗಳನ್ನು ತಲಾ 10 ಅಡಿ ತೆರೆದು ನೀರು ಬಿಡಲಾಗಿದೆ. ಇದರಿಂದ ಚಂದ್ರಂಪಳ್ಳಿ ಕೂಡು ಸೇತುವೆ ಸಂಪೂರ್ಣ ಮುಳುಗಿದೆ. ಗ್ರಾಮ ಸಂಪರ್ಕ ಕಡಿದುಕೊಂಡಿದ್ದು ಗ್ರಾಮಸ್ಥರು ಜಾಗೃತರಾಗಿರಲು ಯೋಜನಾಧಿಕಾರಿ ಚೇತನ ಕಳಸ್ಕರ ಮನವಿ ಮಾಡಿದ್ದಾರೆ.
ಅವರು ಸಿಬ್ಬಂದಿಯೊಂದಿಗೆ ಜಲಾಶಯದಲ್ಲಿ ಠಿಕಾಣಿ ಹೂಡಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಅಗತ್ಯಬಿದ್ದರೆ ನೀರಿನ ಹೊರ ಹರಿವು ಹೆಚ್ಚಿಸುವ ಸಾಧ್ಯತೆಯಿದೆ.
ತಾಲ್ಲೂಕಿನ ನಾಗರಾಳ ಜಲಾಶಯದಿಂದ 4,500 ಕ್ಯುಸೆಕ್ ನೀರು ನದಿಗೆ ಬಿಡಲಾಗಿದ್ದು ತಾಜಲಾಪುರ, ಗಾರಂಪಳ್ಳಿ ಸೇತುವೆಗಳು ಮುಳುಗಿವೆ. ಮುಲ್ಲಾಮಾರಿ ನದಿಯಲ್ಲಿ ಅಡ್ಡಲಾಗಿ ನಿರ್ಮಿಸಿದ ಕನಕಪುರ ಹಳೆ, ಹೊಸ, ಗೌಡನಹಳ್ಳಿ, ನೀಮಾ ಹೊಸಳ್ಳಿ, ಚಂದಾಪುರ, ಪೋಲಕಪಳ್ಳಿ, ಅಣವಾರ, ಭಕ್ತಂಪಳ್ಳಿ, ಬುರುಗಪಳ್ಳಿ ಬ್ರಿಜ್ ಕಂ ಬ್ಯಾರೇಜುಗಳು ಮುಳುಗಿವೆ.
ಇದರ ಜತೆಗೆ ಕುಂಚಾವರಂ ರಾಜ್ಯ ಹೆದ್ದಾರಿ 149ರಲ್ಲಿ ಬರುವ ಮೊಗದಂಪುರದ ಸೇತುವೆ ಮೇಲಿನಿಂದ ನೀರು ಹರಿದು ರಸ್ತೆ ಕೊರೆದಿದ್ದು ಭೋಂಗಾ ಬಿದ್ದಿದೆ. ಅಲ್ಲಿಯೇ ರೈತರೊಬ್ಬರ ತೋಟದ ರಕ್ಷಣಾ ಗೋಡೆ ಉರುಳಿದೆ.
ಪೋಚಾವರಂ ಗ್ರಾಮದ ಸೇತುವೆ ಮುಳುಗಿದ್ದು ಶಿವರೆಡ್ಡಿಪಳ್ಳಿ ಮತ್ತು ಪೋಚಾವರಂ ಎರಡೂ ಗ್ರಾಮಗಳು ಕುಂಚಾವರಂನೊಂದಿಗೆ ಸಂಪರ್ಕ ಕಡಿದುಕೊಂಡಿವೆ. ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಕೆರೆ ಅಪಾಯ ಮೀರಿ ಹರಿದಿದ್ದರಿಂದ ಬಂಡ್ ಕೊರೆದು ಅಲ್ಲಲ್ಲಿ ಬೃಹತ್ ಭೋಂಗಾಗಳು ನಿರ್ಮಾಣವಾಗಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ತಾಲ್ಲೂಕಿನಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಜೋರು ಮಳೆ ಸುರಿಯುತ್ತಿದ್ದು ಕುಂಭ ದ್ರೋಣ ಮಳೆಗೆ ಜನರು ತಲ್ಲಣಗೊಂಡಿದ್ದಾರೆ. ಚಂದಾಪುರ, ಗಾರಂಪಳ್ಳಿ, ಅಣವಾರ, ಕಲ್ಲೂರು, ಕನಕಪುರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.