ADVERTISEMENT

ಸಿದ್ದರಾಮಯ್ಯ ಬಜೆಟ್‌ನತ್ತ ನೋಟ: ಕಲಬುರಗಿ ನಗರಕ್ಕೆ ದೊರೆಯುವುದೇ ವಿಶೇಷ ಅನುದಾನ?

ಮೂಲಸೌಕರ್ಯ ಅಭಿವೃದ್ಧಿಗೆ ಬೇಕಿದೆ ಆರ್ಥಿಕ ನೆರವು

ಮನೋಜ ಕುಮಾರ್ ಗುದ್ದಿ
Published 22 ಫೆಬ್ರುವರಿ 2026, 0:21 IST
Last Updated 22 ಫೆಬ್ರುವರಿ 2026, 0:21 IST
<div class="paragraphs"><p>ವಿಧಾನಸೌಧದ ಹೊರಗೆ ಬಜೆಟ್ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ವಿಧಾನಸೌಧದ ಹೊರಗೆ ಬಜೆಟ್ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ಕಂದಾಯ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ನಗರವು ಕಲಬುರಗಿ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹಂಚಿಹೋಗಿದ್ದು, ಇಂದಿಗೂ ನಗರದ ಪ್ರಮುಖ ರಸ್ತೆಗಳು ಗುಂಡಿಮಯವಾಗಿವೆ. ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ದೊರೆಯುವುದೇ ಎಂಬ ನಿರೀಕ್ಷೆ ಗರಿಗೆದರಿದೆ.

ADVERTISEMENT

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಏಳು ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಗೆ ಡಿ.ಎಂ. ನಂಜುಂಡಪ್ಪ ಅವರ ವರದಿಯ ಶಿಫಾರಸಿನ ಅನುಸಾರ ವಾರ್ಷಿಕವಾಗಿ ಅನುದಾನವನ್ನು ಹಂಚಿಕೆ ಮಾಡುತ್ತದೆ. ಆದರೆ, ಕಲಬುರಗಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಿಗೆ ಮಂಡಳಿಯ ಅನುದಾನ ಸಿಗುವುದು ಅತ್ಯಲ್ಪ. ಹೀಗಾಗಿ, ನಗರವನ್ನು ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವುದು ಅಗತ್ಯ ಎಂಬುದು ನಗರದ ನಾಗರಿಕರ ಒತ್ತಾಯವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ನಗರದ ರಸ್ತೆಗಳ ದುರಸ್ತಿ, ಪುನರ್ ನಿರ್ಮಾಣಕ್ಕಾಗಿ ₹300 ಕೋಟಿ ಅನುದಾನ ಅಗತ್ಯವಿದ್ದು, ಅದರಲ್ಲಿ 53 ರಸ್ತೆಗಳನ್ನು ₹ 127.50 ಕೋಟಿ ವೆಚ್ಚದಲ್ಲಿ ಹೊಸದಾಗಿ ಮರು ನಿರ್ಮಿಸಲಾಗುವುದು’ ಎಂದು ಹೇಳಿದ್ದಾರೆ. ನರಗದ ಜನಸಂಖ್ಯೆ ದಿನೇ ದಿನೇ ಬೆಳೆಯುತ್ತಿದ್ದು ನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕಿದೆ. ಹೀಗಾಗಿ, ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಲಬುರಗಿ ನಗರಕ್ಕೆಂದೇ ಕನಿಷ್ಠ ₹ 500 ಕೋಟಿ ಅನುದಾನ ನೀಡಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತಿವೆ.

ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆಯು ವಿಳಂಬವಾಗುತ್ತಿದೆ. ನಗರದ ಹೊರವಲಯದಲ್ಲಿ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ಅವುಗಳನ್ನೂ ಗಮನದಲ್ಲಿರಿಸಿಕೊಂಡು ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ವ್ಯವಸ್ಥೆ ಹಾಗೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದೇ ಸೊರಗಿರುವ ಮಹಾನಗರ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆಯ ಮೂಲಕ ವಿಶೇಷ ಅನುದಾನವನ್ನು ಮಂಜೂರು ಮಾಡಿ ನಿರಂತರವಾಗಿ ನಗರದ ಮೂಲಸೌಕರ್ಯ ಹಾಗೂ ಸೌಂದರೀಕರಣದ ಕೆಲಸಗಳು ನಡೆಯಲು ಅನುವು ಮಾಡಿಕೊಡಬೇಕು ಎನ್ನುತ್ತಾರೆ ಕುಸನೂರು ರಸ್ತೆಯ ಜಿಡಿಎ ಬಡಾವಣೆಯ ನಿವಾಸಿ ಶಂಕ್ರಯ್ಯ ಘಂಟಿ.

ಹೆಚ್ಚುವರಿ ಹಾಸ್ಟೆಲ್‌, ಗುವಿವಿಗೆ ಕಾಯಕಲ್ಪ ಅಗತ್ಯ: ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಪಿಯು ಕಾಲೇಜುಗಳು, ವೈದ್ಯಕೀಯ, ಎಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಹೇರಳವಾಗಿ ಹೊಂದಿರುವ ಕಲಬುರಗಿ ನಗರದಲ್ಲಿ ಹಾಸ್ಟೆಲ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ನಗರಕ್ಕೆ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಶಯ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದು ಕೊಠಡಿ ಬಾಡಿಗೆ ಹಿಡಿದು ಅಧ್ಯಯನ ನಡೆಸುವುದು ಬಡ ವಿದ್ಯಾರ್ಥಿಗಳಿಗೆ ಕಷ್ಟಕರ. ಆದ್ದರಿಂದ ಸರ್ಕಾರವೇ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬೇಕು. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಬೇಕು ಎನ್ನುತ್ತಾರೆ ನಗರದಲ್ಲಿ ಬಿ.ಇಡಿ. ಪದವಿ ಓದುತ್ತಿರುವ ವಿದ್ಯಾರ್ಥಿನಿ ಬಸಮ್ಮ.

ನಾಲ್ಕು ದಶಕಗಳಷ್ಟು ಹಳೆಯದಾದ ಗುಲಬರ್ಗಾ ವಿಶ್ವವಿದ್ಯಾಲಯದ ಬಹುತೇಕ ಕೊಠಡಿಗಳು ಶಿಥಿಲಗೊಂಡಿದ್ದು, ಗುವಿವಿ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 100 ಕೋಟಿ ವಿಶೇಷ ಅನುದಾನವನ್ನು ಸರ್ಕಾರ ನೀಡಬೇಕು ಎನ್ನುತ್ತಾರೆ ವಿವಿ ಪ್ರಾಧ್ಯಾಪಕರೊಬ್ಬರು.

ಕಲಬುರಗಿ ನಗರಕ್ಕೆ ₹ 1500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮಾಸ್ಟರ್ ಪ್ಲಾನ್ ಮೂಲಕ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಸುಸಜ್ಜಿತ ಸಂಚಾರ ವ್ಯವಸ್ಥೆ ಸುಂದರ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು
- ಸುನೀಲ ಮಾನಪಡೆ, ಯುವ ಹೋರಾಟಗಾರ
ಬೇಸಿಗೆ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಆದ್ದರಿಂದ ಸೌಂದರೀಕರಣದ ಭಾಗವಾಗಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಹಣವನ್ನು ತೆಗೆದಿರಿಸಬೇಕು. ಪ್ರತಿ ರಸ್ತೆ ಕಚೇರಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು
- ಹೇಮಾ ನವಲಗುಂದ, ಕಾಲೇಜು ಉಪನ್ಯಾಸಕಿ ಕಲಬುರಗಿ

ಪ್ರವಾಸಿ ಸರ್ಕ್ಯೂಟ್ ಘೋಷಣೆ ನಿರೀಕ್ಷೆ

ಶರಣರು ಸೂಫಿ ಸಂತರ ನಾಡಾದ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೇರಳ ಅವಕಾಶಗಳಿವೆ. ಆದರೆ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಹೊಂದಿಲ್ಲ. ಕಲಬುರಗಿಯ ಬಹಮನಿ ಕೋಟೆ ಬುದ್ಧ ವಿಹಾರ ಕೆಬಿಎನ್ ದರ್ಗಾ ಸನ್ನತಿಯ ಬೌದ್ಧ ಸ್ತೂಪ ನಾಗಾವಿ ಫಿರೋಜಾಬಾದ್ ಕೋಟೆ ಚಂದ್ರಂಪಳ್ಳಿ ಜಲಾಶಯ ಮಳಖೇಡ ಕೋಟೆ ಗಾಣಗಾಪುರದ ದತ್ತ ಮಂದಿರ ಹೊಳಕುಂದಾ ಗ್ರಾಮದ ಪಾರಂಪರಿಕ ನೆಲೆಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಪ್ರವಾಸಿ ಸರ್ಕ್ಯೂಟ್ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ.

ಗಾಣಗಾಪುರಕ್ಕೆ ಅಮಾವಾಸ್ಯೆ ಪ್ರತಿ ಗುರುವಾರ ಹಾಗೂ ದತ್ತ ಮಹಾರಾಜರ ತೊಟ್ಟಿಲೋತ್ಸವದ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನೆರವು ಕೋರುವುದರ ಜೊತೆಗೆ ರಾಜ್ಯ ಸರ್ಕಾರವೇ ಅಗತ್ಯ ಅನುದಾನ ನೀಡಿ ಅಭಿವೃದ್ಧಿಗೊಳಿಸಬೇಕು. ಇದರಿಂದ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಲಿದ್ದು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಂತಾಗುತ್ತದೆ.

‘ಒಳಚರಂಡಿ ವ್ಯವಸ್ಥೆಗೆ ₹ 300 ಕೋಟಿ‘

ಕಲಬುರಗಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಬಹುತೇಕ ಹಾಳಾಗಿದ್ದು ಹೊಸದಾಗಿ ಸುಮಾರು 300 ಕಿ.ಮೀ. ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಇದರಲ್ಲಿ 92 ಕಿ.ಮೀ. ನವೀಕರಿಸುವುದು ಸೇರಿದಂತೆ ಒಟ್ಟಾರೆ ₹ 300 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ.

ನಗರಕ್ಕೆ ನೀರು ಪೂರೈಕೆ ಮಾಡಲು ಅಗತ್ಯವಿರುವ 24x7 ಯೋಜನೆಯಡಿ ಅಗತ್ಯವಿರುವ ಒಟ್ಟು 1400 ಕಿ.ಮೀ. ಪೈಕಿ ಕೇವಲ 900 ಕಿ.ಮೀ. ಕಾಮಗಾರಿಯನ್ನು ಮಾತ್ರ ಕೈಗೊಂಡಿದ್ದು ಕಲಬುರಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರ ಒಳಗೊಂಡು 500 ಕಿ.ಮೀ. ಪೈಪ್‌ಲೈನ್‌ಗೆ ಅಗತ್ಯವಾದ ಅನುದಾನವನ್ನು ಕೊಡುವಂತೆಯೂ ಕೋರಿದ್ದೇನೆ. ಕಲಬುರಗಿ ದಕ್ಷಿಣ ಉತ್ತರ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಅನುದಾನ ನೀಡಲು ಮನವಿ ಮಾಡಿದ್ದೇನೆ. ಅಲ್ಲಮಪ್ರಭು ಪಾಟೀಲ ಕಲಬುರಗಿ ದಕ್ಷಿಣ ಶಾಸಕ 

ಪ್ರತ್ಯೇಕ ತಹಶೀಲ್ದಾರ್‌ ಕಚೇರಿಗೆ ಬೇಡಿಕೆ

ಕಲಬುರಗಿ ಉತ್ತರ ಮತಕ್ಷೇತ್ರಕ್ಕೆ ಪ್ರತ್ಯೇಕ ತಹಶೀಲ್ದಾರ್‌ ಕಚೇರಿ ಘೋಷಿಸಬೇಕು. ಹಜ್‌ ಭವನ ಸ್ಥಾ‍ಪನೆಗೆ ₹ 20 ಕೋಟಿ ಕ್ಷೇತ್ರದಲ್ಲಿರುವ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ₹ 1.20 ಕೋಟಿ ಐದು ಉದ್ಯಾನಗಳ ಅಭಿವೃದ್ಧಿಗೆ ತಲಾ ₹ 50 ಲಕ್ಷ ಕ್ಷೇತ್ರದ ನಿರ್ವಸತಿ ಜನರಿಗಾಗಿ ರಾಜೀವ್‌ ಗಾಂಧಿ ವಸತಿ ನಿಗಮ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ತಲಾ ಸಾವಿರ ಮನೆಗಳನ್ನು ಬಜೆಟ್‌ನಲ್ಲಿ ಮಂಜೂರಾತಿಗೆ ಕೋರಲಾಗಿದೆ.

ಜಿಲಾನಾಬಾದ್‌ನಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಾಕಡೆ ಚೌಕ್‌ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿದೆ. ಹಾಗರಗಾ ಹಾಗೂ ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಐಟಿಐ ಕಾಲೇಜು ಸ್ಥಾಪಿಸಬೇಕು. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ತನಕ ಒಂದೇ ಸೂರಿನಡಿ ವಸತಿಯುತ ಶಿಕ್ಷಣಕ್ಕೆ ಹೊಸ ಯೋಜನೆ ಘೋಷಿಸಬೇಕು. ಇದನ್ನು ಮುಸ್ಲಿಮರು ಹೆಚ್ಚಾಗಿರುವ ಕಲಬುರಗಿ ನಗರದ ಉತ್ತರ ಮತಕ್ಷೇತ್ರದಲ್ಲಿ ಸ್ಥಾಪಿಸಬೇಕು. ಇದಕ್ಕಾಗಿ ₹ 100 ಮೀಸಲಿಡಬೇಕು ಎಂದು ಕೋರಿದ್ದೇನೆ. ಕನೀಜ್ ಫಾತಿಮಾ ಕಲಬುರಗಿ ಉತ್ತರ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.