ಕಲಬುರಗಿ: ‘ನಗರದ ಒಳಚರಂಡಿ ನೀರನ್ನು ಶುದ್ಧೀಕರಣ ಘಟಕದ ಮಾನದಂಡಗಳ ಪ್ರಕಾರ ಶುದ್ಧೀಕರಿಸಿ ಹಳ್ಳಕ್ಕೆ ಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕೊಳಚೆ ನೀರು ಹಳ್ಳಕ್ಕೆ ಸೇರದಂತೆ ಪಾಲಿಕೆಯಿಂದ ಕ್ರಮ ವಹಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಅವರು ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸಿದ್ದಾರೆ.
ಕಲಬುರಗಿ ನಗರದ ಸುತ್ತಲಿನ ಕೆರೆಭೋಸಗಾ, ಮಾಲಗತ್ತಿ, ವೆಂಕಟಬೇನೂರ, ಸುಲ್ತಾನಪೂರ, ಕಪನೂರ, ಭೂಪಾಲತೆಗನೂರು, ಖಾಜಾಕೋಟನೂರ ಸೇರಿ 10ಕ್ಕೂ ಅಧಿಕ ಹಳ್ಳಿಗಳಿಗೆ ಆಧಾರವಾಗಿರುವ ಹಳ್ಳ ಕಳೆದ ನಾಲ್ಕು ವರ್ಷಗಳಿಂದ ಕಲುಷಿತಗೊಳ್ಳುತ್ತಿದೆ. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಮಾರ್ಚ್ 3ರಂದು ‘ಕಲುಷಿತಗೊಂಡ ದೊಡ್ಡ ಹಳ್ಳ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಶೀಘ್ರವೇ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಪಾಲಿಕೆಗೆ ಸೂಚಿಸಿದ್ದರು.
ಮಾರ್ಚ್ 4ರಂದೇ ಮಹಾನಗರ ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒಳಚರಂಡಿ ಪೈಪ್‌ಲೈನ್‌ಗೆ ಹಾನಿಯಾಗಿ, ಆ ಸ್ಥಳದಲ್ಲಿ ಕಾರ್ಖಾನೆ ನೀರು ಸೇರುತ್ತಿರುವುದು ಕಂಡುಬಂದಿದೆ. ಪೈಪ್‌ಲೈನ್ ದುರಸ್ತಿಗೆ ₹40 ಕೋಟಿಯ ಒಳಚರಂಡಿ ಕಾಮಗಾರಿ ಮಂಜೂರಾಗಿದೆ. ಈ ಯೋಜನೆಯಲ್ಲಿ ಪೈಪ್‌ಲೈನ್ ದುರಸ್ತಿಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಕೊಳಚೆ ನೀರು ಹಳ್ಳಕ್ಕೆ ಸೇರದಂತೆ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.