
ಕಲಬುರಗಿ: ಜಿಲ್ಲೆಯ ಅಫಲಪುರದ ಕಾಂಗ್ರೆಸ್ ಮುಖಂಡ ಮತಿನ್ ಪಟೇಲ್ ಅವರು ಪಿಸ್ತೂಲ್ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮತಿನ್ ಪಟೇಲ್ ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ ಆಪ್ತರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಹೌದು.
ಮತಿನ್ ಪಟೇಲ್ ಹಿಂದಿ ಚಲನಚಿತ್ರ ‘ಧುರಂಧರ್’ನ ಹಾಡಿಗೆ ಡಾನ್ಸ್ ಮಾಡಿರುವುದು ವಿಡಿಯೊದಲ್ಲಿದೆ. ನಗರದ ಬಾಂಬೂ ಬಜಾರ್ ಪ್ರದೇಶದಲ್ಲಿ ಮದುವೆ ಸಮಾರಂಭವೊಂದರಲ್ಲಿ ಇದನ್ನು ಚಿತ್ರಿಕರಿಸಲಾಗಿದೆ ಎನ್ನಲಾಗಿದೆ.
‘ವಿಡಿಯೊದಲ್ಲಿ ಎರಡು ಮಾರಕ ಅಸ್ತ್ರಗಳು ಕಂಡಿವೆ. ಅದರಲ್ಲೊಂದು ಆಟಿಕೆ ಬಂದೂಕು, ಮತ್ತೊಂದು ಪರವಾನಗಿಯುಳ್ಳ ಪಿಸ್ತೂಲ್ ಎಂದು ಗೊತ್ತಾಗಿದೆ. ‘ಈ ಕುರಿತು ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪರವಾನಗಿಯನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.