ADVERTISEMENT

ಎಇಇ, ಜೆಇ ಅಮಾನತಿಗೆ ಸೂಚನೆ: ಪಾಲಿಕೆ ಸಾಮಾನ್ಯ ಸಭೆ ನಿರ್ಣಯ

ಎಸ್‌ಟಿಪಿ ಸಮಸ್ಯೆಯಿಂದ ಕಲುಷಿತ ನೀರು ಪೂರೈಕೆ; ಪಾಲಿಕೆ ಸಾಮಾನ್ಯ ಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:01 IST
Last Updated 19 ಫೆಬ್ರುವರಿ 2026, 5:01 IST
ಮೇಯರ್‌ ವರ್ಷಾ ಜಾನೆ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು
ಮೇಯರ್‌ ವರ್ಷಾ ಜಾನೆ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು   

ಕಲಬುರಗಿ: ನಂದಿಕೂರ ಬಳಿಯಿರುವ ಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗದ ಎಇಇ ಪುರುಷೋತ್ತಮ ಹಾಗೂ ಜೆಇ ಮಹೇಶ ಪಾಟೀಲ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಲು ಕಲಬುರಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ತೀರ್ಮಾನಿಸಿತು.

2025ರ ಡಿಸೆಂಬರ್‌ 22, 23ರ ಸಾಮಾನ್ಯ ಸಭೆಯಲ್ಲಿ ಬಾಕಿ ಉಳಿದ ಅಂಶಗಳ ಚರ್ಚೆಗೆ ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮೇಯರ್‌ ವರ್ಷಾ ಜಾನೆ ಅಧ್ಯಕ್ಷತೆಯಲ್ಲಿ ಬುಧವಾರ ಮತ್ತೆ ಸಭೆ ನಡೆಯಿತು.

ವಿರೋಧ ಪಕ್ಷ ಬಿಜೆಪಿ ಸದಸ್ಯರ ಗೈರು ಹಾಜರಿಯಲ್ಲಿ ನಡೆದ ಸಭೆಯಲ್ಲಿ ಊಟದ ವಿರಾಮದ ಬಳಿಕ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆ ಸಮಸ್ಯೆಗಳು ಪ್ರತಿಧ್ವನಿಸಿದವು.

ADVERTISEMENT

ವಿಷಯ ಪ್ರಸ್ತಾಪಿಸಿ ಮಾತನಾಡಿದ ವಾರ್ಡ್‌ ನಂ.18ರ ಸದಸ್ಯ ಸೈಯದ್‌ ಅಹ್ಮದ್, ‘ರಾಮಜಿ ನಗರದ ರಸ್ತೆ ಪ್ರದೇಶದಲ್ಲಿ ನೀರೇ ಪೂರೈಕೆ ಆಗುತ್ತಿಲ್ಲ. ಪಾಲಿಕೆ ಕೊಡುತ್ತಿರುವ ನೀರು ಮನುಷ್ಯರು ಬಿಡಿ, ಪ್ರಾಣಿಗಳೂ ಕುಡಿಯಲು ಯೋಗ್ಯವಿಲ್ಲ. ಇತ್ತೀಚೆಗೆ ನಗರದ ಒಳಚರಂಡಿ ನೀರು ಸಂಸ್ಕರಣಾ ವ್ಯವಸ್ಥೆ ಕೆಟ್ಟು ನಗರಕ್ಕೆಲ್ಲ ಕಲುಷಿತ ನೀರು ಪೂರೈಕೆಯಾಗಿದೆ. ಯಾರಾದಾದರೂ ಜೀವಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ? ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಮೇಯರ್‌ ವರ್ಷಾ ಜಾನೆ ಅವರೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಎಇಇ ಹಾಗೂ ಜೆಇಗಳನ್ನು ಕೂಡಲೇ ಅಮಾನತು ಮಾಡಲು ಸದಸ್ಯರು ಆಗ್ರಹಿಸಿದರು.

ಅಂತಿಮವಾಗಿ ಮೇಯರ್‌ ವರ್ಷಾ ಜಾನೆ, ‘ಇಬ್ಬರೂ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಅವರ ಅಮಾನತಿಗೆ ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಬೇಕು’ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಅವರಿಗೆ ಸೂಚಿಸಿದರು. ಆಯುಕ್ತ ಶಿಂದೆ ಕ್ರಮದ ಭರವಸೆ ನೀಡಿದರು.

ಇದಕ್ಕೂ ನಗರದ ಬೀದಿ ದೀಪಗಳ ಸಮಸ್ಯೆ, ಪಾಲಿಕೆ ಸ್ವತ್ತುಗಳ ಒತ್ತುವರಿ, ಪಾಲಿಕೆ ಆದಾಯದ ಮೂಲ ಹೆಚ್ಚಿಸುವ ವಿಷಯಗಳು ಚರ್ಚೆಯಾದವು.

ಉದ್ದಿಮೆ ಪರವಾನಗಿ ಸಮೀಕ್ಷೆ ನಡೆಸಲು ಹೊರಗುತ್ತಿಗೆ ನೀಡುವ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷ ಅಯಾಜ್‌ ಖಾನ್‌ ಪ್ರಸ್ತಾಪಿಸಿದರು. ಇದಕ್ಕೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಯಲ್ಲಪ್ಪ ನಾಯಕೋಡಿ, ಸಭಾನಾಯಕ ಅಜ್ಮಲ್‌ ಗೋಲಾ, ಸಚಿನ್‌ ಶಿರವಾಳ ಪರವಾಗಿ ಮಾತನಾಡಿದರು.

ನಾಲ್ಕೂ ಸ್ಥಾಯಿಗಳ ಸಮಿತಿಗಳ ಸದಸ್ಯರು ಸೇರಿದಂತೆ 27ಕ್ಕೂ ಅಧಿಕ ಸದಸ್ಯರು ಹಾಜರಿದ್ದರು. 

ನೂತನ ಲೋಗೊ:

ಮಹಾನಗರ ಪಾಲಿಕೆಗೆ ಬುದ್ಧವಿಹಾರ ಚಿತ್ರವೊಳಗೊಂಡ ನೂತನ ಲೋಗೊ ಹೊಂದುವ ನಿಟ್ಟಿನಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಲಾಯಿತು.

ನೂತನ ಲೋಗೊದಲ್ಲಿ ‘ಕಮಲ’ದ ಚಿತ್ರ ಕೈ ಬಿಡಲಾಗಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಲಬುರಗಿಯ ಟೌನ್‌ ಹಾಲ್‌ ದ್ವಾರದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು
ಕಾಂಗ್ರೆಸ್‌ನವರಿಗೆ ಅಧಿಕಾರ ನೆತ್ತಿಗೇರಿದೆ. ಕೋರಂ ಇಲ್ಲದೇ ಸಭೆ ನಡೆಸಿ ನಿರ್ಣಯಗಳನ್ನು ಮಾಡಿದ್ದಾರೆ. ಇದನ್ನು ತಿರಸ್ಕರಿಸಲು ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ
ವಿಶಾಲ್‌ ದರ್ಗಿ ಪಾಲಿಕೆಯ ಬಿಜೆಪಿ ಸದಸ್ಯ

‘ಪರಿಹಾರ ಕೋರಿ ಪ್ರಸ್ತಾವ ಸಲ್ಲಿಕೆ’

‘ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಭೂಸ್ವಾಧೀನ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಪ್ತಿ ಆದೇಶ ತಂದು ಪೀಠೋಪಕರಣ ಕಂಪ್ಯೂಟರ್‌ ವಶಕ್ಕೆ ಪಡೆಯುತ್ತಿರುವುದು ಅವಮಾನಕರ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಇವುಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು’ ಎಂದು ಪಾಲಿಕೆ ಸದಸ್ಯರಾದ ಸೈಯದ್‌ ಅಹ್ಮದ್ ಯಲ್ಲಪ್ಪ ನಾಯಕೊಡಿ ಮತ್ತಿತರರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಅವಿನಾಶ ಶಿಂದೆ ‘ನಂದಿಕೂರ ಬಳಿಯ 47 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 11 ಸಂತ್ರಸ್ತರಿಗೆ ಪರಿಹಾರ ಕೊಡಲಾಗಿದೆ. ಕೆಲವರು ಕೋರ್ಟ್‌ಗೆ ಹೋಗಿದ್ದರಿಂದ ಇದೀಗ 6 ಮಂದಿಗೆ ₹ 82 ಕೋಟಿಗಳಷ್ಟು ಪರಿಹಾರ ಕೊಡಬೇಕಿದೆ. ಈ ಕುರಿತು ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅದಲ್ಲಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಹೋಗಿದೆ.

ಅಲ್ಲಿಂದ ಆರ್ಥಿಕ ಇಲಾಖೆಗೆ ಹೋಗಬೇಕಿದ್ದು ಇನ್ನೊಂದು ತಿಂಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ’ ಎಂದರು. ‘ನಗರದಲ್ಲಿ ವಿವಿಧ ರಸ್ತೆಗಳಿಗೆ ಮಾಡಿಕೊಂಡ ಭೂಸ್ವಾಧೀನದ 250 ಪ್ರಕರಣಗಳ ಪೈಕಿ 87 ಜಪ್ತಿ ಆದೇಶಗಳಿವೆ. ಒಟ್ಟು ₹ 300 ಕೋಟಿಗಳಷ್ಟು ಹಣ ಬೇಕಾಗುತ್ತದೆ. ಅಷ್ಟು ಹಣ ಪಾಲಿಕೆಯಲ್ಲಿ ಇಲ್ಲ. ಹೀಗಾಗಿ ಈ ಕುರಿತೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.