ADVERTISEMENT

‘ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ’

ಮಹಾನಗರ ಪಾಲಿಕೆ ಮೇಯರ್‌ ವರ್ಷಾ ರಾಜೀವ ಜಾನೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:14 IST
Last Updated 1 ಫೆಬ್ರುವರಿ 2026, 6:14 IST
ವರ್ಷಾ ಜಾನೆ
ವರ್ಷಾ ಜಾನೆ   

ಕಲಬುರಗಿ: ‘ನಂದಿಕೂರ ಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದಲ್ಲಿ ಯಂತ್ರಗಳ ದೋಷದಿಂದ ಕಲಬುರಗಿ ನಗರಕ್ಕೆ ಭೀಮಾ ನದಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ದುರಸ್ತಿ ಕಾರ್ಯ ನಡೆದಿದ್ದು, ಒಂದೆರಡು ದಿನಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್‌ ವರ್ಷಾ ರಾಜೀವ ಜಾನೆ ತಿಳಿಸಿದರು.

ನಗರದ ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಿಕೂರ ಎಸ್‌ಟಿಪಿಯಲ್ಲಿ ಸಂಸ್ಕರಿಸಿದ ನೀರು ಮುಂದೆ ಕುಡಿಯುವ ನೀರು ಸರಬರಾಜು ಮಾಡುವ ಭೀಮಾನದಿಯ ಸರಡಗಿ ಬ್ಯಾರೇಜ್‌ ಸೇರುತ್ತದೆ. ಎಸ್‌ಟಿಪಿಯಲ್ಲಿ ಯಂತ್ರಗಳ ದೋಷ ಕಂಡುಬಂದ ತಕ್ಷಣ ಸಾರ್ವಜನಿಕರಿಗೆ ಕಲುಷಿತ ನೀರು ಸರಬರಾಜು ಆಗಬಾರದು ಎನ್ನುವ ಕಾರಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು’ ಎಂದು ಸ್ಪಷ್ಟಪಡಿಸಿದರು.

‘ಪಾಲಿಕೆಯಿಂದ ಅಳವಡಿಸಿರುವ ಚರಂಡಿ ನೀರು ಸಂಸ್ಕರಣಾ ಘಟಕಗಳಲ್ಲಿ 60 ಎಂಎಲ್​ಡಿ ನೀರಿನ ಸಾಮರ್ಥ್ಯ ಮಾತ್ರ ಇದೆ. ಆದರೆ, 80 ಎಂಎಲ್​ಡಿ ನೀರು ಬರುತ್ತಿದ್ದು, ಅದನ್ನು ಸಹ ಸಂಸ್ಕರಿಸಲಾಗುತ್ತಿದೆ. ಯಂತ್ರಗಳ ದುರಸ್ತಿ ಸಲಕರಣೆ ಪುಣೆ, ಗುಜರಾತ್​ನಿಂದ ತರಿಸುವ ಕಾರಣದಿಂದ ಒಂದು ವಾರ ನೀರು ವ್ಯತ್ಯಯ ಉಂಟಾಗಿದೆ’ ಎಂದು ವಿವರಿಸಿದರು.

ADVERTISEMENT

‘ಎಸ್‌ಟಿಪಿಯಲ್ಲಿ ಸಂಸ್ಕರಿಸುವ ಸಾಮರ್ಥ್ಯ ಹೆಚ್ಚಳಕ್ಕೆ ಮತ್ತು ಈ ನೀರು ಸೇತುವೆ ಕೆಳಭಾಗಕ್ಕೆ ಬಿಡುವ ಉದ್ದೇಶಿತ ಕಾಮಗಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಅವರು ಕೆಕೆಆರ್‌ಡಿಬಿ ಮೂಲಕ ₹ 8 ಕೋಟಿ ಅನುದಾನ ಕೊಡಿಸಿದ್ದು, ಈ ಯೋಜನೆ ಪೂರ್ಣಗೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದರು.

ಚರಂಡಿಗೆ ಕೆಮಿಕಲ್: ‘ನಗರದ ನಾಗನಹಳ್ಳಿ ವೃತ್ತ ಸಮೀಪದ ಚರಂಡಿಯಲ್ಲಿ ಕೈಗಾರಿಕೆಗಳ ಕೆಮಿಕಲ್​ ತಂದು ಸುರಿಯುತ್ತಿದ್ದು, ಸಂಸ್ಕರಣ ಘಟಕದಲ್ಲಿ ಹೆಚ್ಚಿನ ನೊರೆ ಕಾಣುತ್ತಿದೆ. ನೀರು ಹೆಚ್ಚು ಕಲುಷಿತವಾಗಿದೆ. ಅನಧಿಕೃತವಾಗಿ ಕೆಮಿಕಲ್​ ತಂದು ಸುರಿಯುತ್ತಿರುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌​ ಇಲಾಖೆಗೆ ದೂರು ನೀಡಲಾಗಿದೆ’ ಎಂದು ಮೇಯರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.