ಭೂಕಂಪ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕೆಲವೆಡೆ ಗುರುವಾರ ಬೆಳಿಗ್ಗೆ 8.17 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ.
‘ಆಳಂದ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜವಳಗಾ ಗ್ರಾಮದ ಸಮೀಪ ಗುರುವಾರ ಬೆಳಿಗ್ಗೆ 8.17 ನಿಮಿಷಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲಾಗಿದೆ. ಜವಳಗಾದಿಂದ ಆಗ್ನೇಯ ದಿಕ್ಕಿಗೆ ಅರ್ಧ ಕಿಲೊಮೀಟರ್ ದೂರದಲ್ಲಿ ಭೂಮಿಯ7 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು. ಗ್ರಾಮದಿಂದ 2.4 ಕಿ.ಮೀ ದೂರದಲ್ಲಿರುವ ಸಿರಿಚಂದ ಗ್ರಾಮ ಪಂಚಾಯಿತಿ, 4 ಕಿ.ಮೀ ದೂರದ ಚಿಂಚನಸೂರು ಗ್ರಾಮ ಪಂಚಾಯಿತಿ ಸೇರಿದಂತೆ ಹಲವೆಡೆ ಭೂಮಿ ಕಂಪನದ ಅನುಭವವಾಗಿದೆ. ಇದು ಲಘು ಭೂಕಂಪನವಾಗಿದ್ದು, ಜನರು ಭೀತರಾಗುವ ಅಗತ್ಯವಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
‘ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ನಡೆದ ಭೂಕಂಪನದ ಸಂಭವಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದೇನೆ. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಭೂಕಂಪನವು ಸಣ್ಣ ಪ್ರಮಾಣದ್ದಾಗಿದ್ದು ಸಾರ್ವಜನಿಕರು ಹಾಗೂ ಚಿಂಚನಸೂರು ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯ ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.