
ಕಲಬುರಗಿ: ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತದ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತೀವ್ರ ಬೇಸರ ವ್ಯಕ್ತಪಡಿಸಿದರು.
ನಗರದ ಡಿಸಿ ಕಚೇರಿಗೆ ಸೋಮವಾರ ಭೇಟಿ ನೀಡಿದ ನ್ಯಾ. ಪಾಟೀಲ ಅವರು ಸುಮಾರು ಒಂದು ಗಂಟೆ ಕಾಲ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಜಿಲ್ಲೆಯಾದ್ಯಂತ 55 ಅರ್ಜಿಗಳ ಪೈಕಿ ಏಳು ಪ್ರಕರಣಗಳಲ್ಲಿ ಮಾತ್ರ ಭೂಮಿ ಹಂಚಿಕೆ ಮಾಡಲಾಗಿದೆ. ದೇಶಕ್ಕಾಗಿ ತಮ್ಮ ಕುಟುಂಬವನ್ನು ಮರೆತು ಹೋರಾಟ ಮಾಡಿದ ಮಾಜಿ ಸೈನಿಕರ ಬೇಡಿಕೆಯನ್ನು ಈಡೇರಿಸದೇ ಇರುವುದು ಸರಿಯಲ್ಲ. ಕೂಡಲೇ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಿ ಅದರ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ತಾಕೀತು ಮಾಡಿದರು.
ಕೆರೆಗಳ ಒತ್ತುವರಿ, ಭೂ ವ್ಯಾಜ್ಯ ಪ್ರಕರಣಗಳು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆ ವಿಭಾಗ, ಸಿಎಸ್‌ಆರ್, ಪಿಡಿ ಖಾತೆ, ಪಿಂಚಣಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಸೂಕ್ತ ಮಾಹಿತಿ ನೀಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನ್ಯಾಯಾಲಯದಲ್ಲಿ ಬಾಕಿ ಇರುವ ಕಂದಾಯ ಇಲಾಖೆಯ 46 ಪ್ರಕರಣಗಳ ಪೈಕಿ 18 ಇತ್ಯರ್ಥಕ್ಕೆ ಬಾಕಿ ಇವೆ ಎಂಬುದನ್ನು ವಿಷಯ ನಿರ್ವಾಹಕರು ಲೋಕಾಯುಕ್ತರ ಗಮನಕ್ಕೆ ತಂದರು. ಕಳೆದ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗಿನ ಮಾಹಿತಿಯನ್ನು ನೀಡುವಂತೆ ನ್ಯಾ. ಬಿ.ಎಸ್.ಪಾಟೀಲ ಅವರು ಸೂಚಿಸಿದರು. ಮಾಹಿತಿಗೆ ಕೆಲ ಸಿಬ್ಬಂದಿ ತಡಬಡಾಯಿಸಿದಾಗ ನೆರವಿಗೆ ಬಂದ ಎಡಿಸಿ ರಾಯಪ್ಪ ಹುಣಸಗಿ ಹಾಗೂ ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ ಅಗತ್ಯ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ 254 ಕೆರೆಗಳ ಪೈಕಿ ಕೇವಲ ಆರು ಕೆರೆಗಳು ಒತ್ತುವರಿಯಾಗಿವೆ ಎಂಬ ಮಾಹಿತಿಯನ್ನು ಪಡೆದ ಲೋಕಾಯುಕ್ತರು ಅಚ್ಚರಿ ವ್ಯಕ್ತಪಡಿಸಿದರು. ನೀವು ನೀಡುವ ಮಾಹಿತಿ ಸರಿ ಇದೆಯೇ ಎಂದು ಪ್ರಶ್ನಿಸಿದರು. ಒಂದು ವೇಳೆ ಆರಕ್ಕಿಂತ ಹೆಚ್ಚು ಕೆರೆಗಳು ಒತ್ತುವರಿಯಾಗಿದ್ದರೆ ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್, ಲೋಕಾಯುಕ್ತ ಕಲಬುರಗಿ ಎಸ್ಪಿ ಸಿದ್ದರಾಜು ಸೇರಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಪಹಣಿ ತಿದ್ದುಪಡಿಗೆ ವಾರದ ಗಡುವು ವಾಡಿಯಿಂದ ಡಿಸಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿ ತಮ್ಮ ಜಮೀನಿನ ಪಹಣಿಯಲ್ಲಿ ಬೇರೆಯವರ ಹೆಸರು ತಪ್ಪಾಗಿ ನಮೂದಾಗಿದೆ. ನಿಜವಾದ ವಾರಸುದಾರರ ಹೆಸರು ಸೇರಿಸಲು 25 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ಪಾಟೀಲ ಅವರು 25 ವರ್ಷಗಳಿಂದ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದರೆ ಏನರ್ಥ? ಒಂದು ವಾರದಲ್ಲಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸಿ ತಮಗೆ ವರದಿ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.