ADVERTISEMENT

ತೊಗರಿಗೆ ₹12,500 ಎಂಎಸ್‌ಪಿ: ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳೊಂದಿಗೆ ಡಿಸಿ ಕಚೇರಿ ಎದುರು ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 8:36 IST
Last Updated 22 ಜನವರಿ 2026, 8:36 IST
   

ಕಲಬುರಗಿ: ಪ್ರತಿ‌ ಕ್ವಿಂಟಲ್‌ ತೊಗರಿಗೆ ₹12,500 ಕನಿಷ್ಠ ‌ಬೆಂಬಲ‌‌ ಬೆಲೆ ನೀಡುವುದು ಸೇರಿದಂತೆ ಎಂಟು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ‌ಎದುರು ಜಮಾಯಿಸಿದ ರೈತರು, ರೈತ ಮುಖಂಡರು ಟ್ರ್ಯಾಕ್ಟರ್ ಗಳು, ಎತ್ತಿನ ಬಂಡಿಗಳೊಂದಿಗೆ ಧರಣಿ ಪ್ರಾರಂಭಿಸಿದರು.

'ರೈತರ ಗೋಳು ಕೇಳದ ಸರ್ಕಾರಕ್ಕೆ ಧಿಕ್ಕಾರ, ರೈತರಿಗೆ ಬೆಅಲೆ ನಷ್ಟ ಪರಿಹಾರ ಕೊಡಲೇ ಬೇಕು, ಬೆಳೆ ವಿಮೆ ಮಂಜೂರು ಮಾಡಲೇಬೇಕು' ಎಂದು ಘೋಷಣೆ ಮೊಳಗಿಸಿದರು.

ADVERTISEMENT

ಮುಖಂಡ ಮೌಲಾ ಮುಲ್ಲಾ ಮ ಮಾತನಾಡಿ, 'ಕೇಂದ್ರ ಸರ್ಕಾರ ಈ ಹಿಂದೆ ರೈಲ್ವೆ ಬಜೆಟ್ ಮಂಡಿಸಿದಂತೆ ಕೃಷಿಗೂ ‌ಪ್ರತ್ಯೇಕ ಬಜೆಟ್ ಮಂಡಿಸಬೇಕು. ಆ ಮೂಲಕ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ‌ಒತ್ತು ನೀಡಬೇಕು' ಎಂದು ಒತ್ತಾಯಿಸಿದರು.

'ಈ ಭಾಗದಲ್ಲಿ ತೊಗರಿ ವಾಣಿಜ್ಯ ಬೆಳೆ.‌ ಜಿಐ ಟ್ಯಾಗ್ ಹೊಂದಿದ ಫಸಲು. ಆದರೆ, ಅಂಥ ಬೆಳೆಗೂ ವಿಶೇಷ ದರ ಸಿಗುತ್ತಿಲ್ಲ. ಜಿಐ ತೊಗರಿಗೆ ಶೇ25ರಷ್ಟು ಹೆಚ್ಚುವರಿ ‌ದರ ನೀಡಲು ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಸ್ತುಸ್ಥಿತಿ ಮಾತ್ರ ಭಿನ್ನವೇ ಆಗಿದೆ. ರಾಜಕಾರಣಿಗಳು ಹೆಸರಿಗೆ ಮಾತ್ರವೇ ತಾವೂ ರೈತರ‌ ಮಕ್ಕಳು ಎನ್ನುತ್ತಾರೆ. ಆದರೆ, ಬರೀ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಭೀಮಾಶಂಕರ ‌ಮಾಡಿಯಾಳ ಮಾತನಾಡಿ, 'ಕಾಂಗ್ರೆಸ್ ‌ಮತ್ತು ಬಿಜೆಪಿ‌ ಎರಡೂ ರೈತ ವಿರೋಧಿಗಳೇ ಆಗಿವೆ. ಸಂಕಷ್ಟದಲ್ಲಿರುವ ರೈತರ ಸಾಲ ಕೂಡಲೇ ಮನ್ನಾ ಮಾಡಬೇಕು. ತ್ವರಿತವಾಗಿ ಬೆಳೆ ವಿಮೆ ಪರಿಹಾರ ಮಂಜೂರು ಮಾಡಬೇಕು' ಎಂದು ಆಗ್ರಹಿಸಿದರು.

ಮುಖಂಡ ಶರಣಬಸಪ್ಪ ಮಮಶೆಟ್ಟಿ, 'ಪ್ರತಿ ಕ್ವಿಂಟಲ್ ತೊಗರಿಗೆ ಕೂಡಲೇ ಕನಿಷ್ಠ ಬೆಂಬಲ ಬೆಲೆಯನ್ನು ₹12,500 ನಿಗದಿ ಮಾಡಬೇಕು. ಅದರ ಜೊತೆಗೆ ಕೇಂದ್ರ‌ ಸರ್ಕಾರ ಹಾಗೂ ‌ರಾಜ್ಯ‌ ಸರ್ಕಾರ ಪ್ರತ್ಯೇಕವಾಗಿ ತಲಾ ₹1 ಸಾವಿರ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಜೊತೆಗೆ ಅತಿವೃಷ್ಟಿಯಿಂದ ಹಾನಿಯಾದ ತೊಗರಿ ಬೆಳೆಗಾರರಿಗೆ ಪರಿಹಾರ ನೀಡಬೇಕು' ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡರಾದ ಮೌಲಾಮುಲ್ಲಾ, ಉಮಾಪತಿ ಪಾಟೀಲ್, ಸಿದ್ದು ಎಸ್ ಎಲ್, ಭೀಮಾಶಂಕರ ಮಾಡಿಯಾಳ್, ಅರ್ಜುನ್ ಗೊಬ್ಬೂರು, ಕರೆಪ್ಪ ಕರಗೊಂಡ, ನಾಗಯ್ಯ ಸ್ವಾಮಿ, ಸಿದ್ದಪ್ಪ ಕಲಶೆಟ್ಟಿ, ವೀರಣ್ಣ ಗಂಗಾಣಿ, ಜಾಫರ್ ಖಾನ್, ಗುಂಡಪ್ಪ, ಮೌನೇಶ್ ನಾಲಾವರ್, ಸಿದ್ದಮ್ಮ ಮುತ್ತಗಿ, ಸಿದ್ದಾರ್ಥ ಠಾಕೂರ್, ಶ್ಯಾಮರಾಯ ದಿಗ್ಗಾಂವ್ ಸೇರಿ ನೂರಾರು ರೈತರು ಹೋರಾಟಗಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.