
ಕಲಬುರಗಿ: ‘2012ರಲ್ಲಿ ಲೀಸ್ ಕೊಟ್ಟ ಮಳಿಗೆಯ ಗುತ್ತಿಗೆ ಪತ್ರಕ್ಕೆ ಈತನಕ ಪಾಲಿಕೆ ಕಮಿಷನರ್ ಅವರ ಸಹಿ ಯಾಕೆ ಮಾಡಿಸಿಲ್ಲ?’, ‘ಇದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು 2023ರಲ್ಲಿ ಕೊಟ್ಟ ಅರ್ಜಿ, ಅದು ಯಾವ ಸ್ಥಿತಿಯಲ್ಲಿದೆ? ಅದಕ್ಕೆ ಎಸ್ಟೇಟ್ ವಿಭಾಗದಲ್ಲೇನು ಕೆಲಸ?’, ‘ಡಿ ಗ್ರೂಪ್ ಸಿಬ್ಬಂದಿ ಯೂನಿಫಾರ್ಮ್ ಯಾಕೆ ಹಾಕಿಲ್ಲ?’, ‘ಈ ಕೌಂಟರ್‌ನಲ್ಲಿ ಅನಾಥವಾಗಿ ಗುಡ್ಡೆ ಬಿದ್ದ ಫೈಲ್‌ಗಳ ಕಸ್ಟೋಡಿಯನ್ ಯಾರು...?’
ಇದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪ್ರಭಾರ ರೆಜಿಸ್ಟ್ರಾರ್ ಜೆ.ವಿ.ವಿಜಯಾನಂದ ಅವರು ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಅಧಿಕಾರಿಗಳು, ಸಿಬ್ಬಂದಿಯನ್ನು ಪ್ರಶ್ನಿಸಿದ ವೈಖರಿ.
ಸೋಮವಾರ ಬೆಳಿಗ್ಗೆ ಪಾಲಿಕೆ ಕಚೇರಿಗೆ ದಿಢೀರ್ ಭೇಟಿ ನೀಡಿದ ಅವರು ವಿವಿಧ ವಿಭಾಗಗಳಲ್ಲಿ ಹಲವು ಗಂಟೆಗಳ ಕಾಲ ಹತ್ತಾರು ಕಡತಗಳ ತಪಾಸಣೆ ನಡೆಸಿದರು. ಪಾಲಿಕೆಯಲ್ಲಿನ ಅವ್ಯವಸ್ಥೆ, ಕಡತಗಳ ಅವಸ್ಥೆ, ಅಧಿಕಾರಿಗಳ ಅಸಮರ್ಪಕ ಉತ್ತರಕ್ಕೆ ಕೆಂಡಾಮಂಡಲವಾದರು.
ಎಸ್ಟೇಟ್ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿದ್ದ ಫೈಲ್ ತೆರೆದರು. ಅದು 2012ರಲ್ಲಿ ಪಾಲಿಕೆಯ ಮಳಿಗೆ ಲೀಸ್‌ಗೆ ಸಂಬಂಧಿಸಿ ಕಡತವಾಗಿತ್ತು. ಲೀಸ್ ಬಾಂಡ್ ಮೇಲೆ ಪಾಲಿಕೆ ಆಯುಕ್ತರ ಸಹಿಯೇ ಇರಲಿಲ್ಲ. ಇದನ್ನು ಕಂಡು ಸಿಟ್ಟಾದರು. ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅದೇ ವಿಭಾಗದಲ್ಲಿ ಚುನಾವಣಾ ಶಾಖೆಯ ಫೈಲ್ ಸಿಕ್ಕಿತು. ಅದನ್ನು ತೆರೆದಾಗ ‘ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿಗಳು ಅದರಲ್ಲಿದ್ದವು. ಒಂದನ್ನು ಕೈಗೆತ್ತಿಕೊಂಡರು. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು 2023ರಲ್ಲಿ ಸಲ್ಲಿಸಿದ ಅರ್ಜಿ ಅದಾಗಿತ್ತು. ಈಗ ಯಾವ ಸ್ಥಿತಿಯಲ್ಲಿದೆ? ಇದಕ್ಕೆ ಎಸ್ಟೇಟ್ ವಿಭಾಗದಲ್ಲೇನು ಕೆಲಸ?’ ಎಂದು ಪ್ರಶ್ನಿಸಿದರು. ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು. ಎರಡು ಗಂಟೆ ಬಳಿಕ ಆ ಫೈಲ್‌ನಲ್ಲಿದ್ದ ಅರ್ಜಿಗಳ ಪೈಕಿ 6 ಅರ್ಜಿಗಳು ಎರಡು ವರ್ಷಗಳಾದರೂ ಇತ್ಯರ್ಥವಾಗಿಲ್ಲ ಎಂಬುದನ್ನು ತಿಳಿದು ಕೋಪಗೊಂಡರು.
‘ಡಿ’ ಗ್ರೂಪ್ ಸಿಬ್ಬಂದಿ ಯೂನಿಫಾರ್ಮ್ ಯಾಕೆ ಧರಿಸಿಲ್ಲ?’ ಎಂದು ವಿಜಯಾನಂದ ಪ್ರಶ್ನಿಸಿದರು. ‘ಸಮವಸ್ತ್ರ ಕೊಟ್ಟಿಲ್ಲ’ ಎಂದು ಸಿಬ್ಬಂದಿ ಹೇಳಿದ್ದನ್ನು ವಿಜಯಾನಂದ ಅವರು ಟಿಪ್ಪಣಿ ಮಾಡಿಸಿದರು.
ಪಾಲಿಕೆಯ ಮೈನಸ್ 2ನೇ ಅಂತಸ್ತಿನಲ್ಲಿರುವ ಕೊಠಡಿಯೊಂದನ್ನು ಹೊಕ್ಕ ವಿಜಯಾನಂದ, ದೂಳು ಹಿಡಿದಿದ್ದ ಫೈಲ್‌ಗಳನ್ನು ಹೊರ ತೆಗೆದರು. ಅದರಲ್ಲಿ ಜಿ+1 ಕಟ್ಟಡ ನಿರ್ಮಿಸಿಕೊಂಡ ನಾಗರಿಕರೊಬ್ಬರು ಅದಕ್ಕೆ ತೆರಿಗೆ ನಿರ್ಧಾರಣೆ ಮಾಡುವಂತೆ ಕೋರಿ 2022ರಲ್ಲಿ ಸಲ್ಲಿಸಿದ ಅರ್ಜಿ ಸಿಕ್ಕಿತು. ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಖುದ್ದು ವಿಚಾರಿಸಿದರು.
ಬಳಿಕ ‘ಈ ತನಕ ಯಾಕೆ ಅರ್ಜಿ ಇತ್ಯರ್ಥವಾಗಿಲ್ಲ. ಜನ ತಾವಾಗಿಯೇ ಹಣ ಕಟ್ತೀವಿ ಎಂದರೂ ಯಾಕೆ ಅದಕ್ಕೆ ಕ್ರಮವಹಿಸಲ್ಲ? ಅಧಿಕಾರಿಗಳು ಏನು ಮಾಡುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೂಳು ಹಿಡಿದ ಕೈಚೀಲವೊಂದು ತೆರೆದಾಗ ಅದರಲ್ಲಿ ‘ಮತದಾರರ ಮಾರ್ಗದರ್ಶಿ’ ಕರಪತ್ರಗಳು ತುಂಬಿದ್ದವು. ‘ಜನ ಹಣಕ್ಕೆ ಮತ ಮಾರಿಕೊಳ್ಳುವ ಸ್ಥಿತಿ ದೇಶದಲ್ಲಿದೆ. ಜಾಗೃತಿ ಮೂಡಿಸಿದರೆ ಮತದಾರರ ಮನಸು ಬದಲಿಸಬಹುದು. ಅದಕ್ಕೆ ಸರ್ಕಾರ ದುಡ್ಡು ವೆಚ್ಚ ಮಾಡಿ ಕರಪತ್ರ ಕೊಟ್ಟರೆ ಹಂಚದೇ ಉಳಿಸಿದ್ದೇಕೆ?’ ಎಂದು ತರಾಟೆಗೆ ತೆರೆದುಕೊಂಡರು.
ಲೋಕಾಯುಕ್ತ ಸಿಬ್ಬಂದಿ ಸಂತೋಶಮ್ಮ, ಪನಗಲಾಲ್ ತಿವಾರಿ, ರಾಣೋಜಮ್ಮ ಸೇರಿದಂತೆ ಹಲವು ಇದ್ದರು.
‘ಕೆಟ್ಟ ಚಾಳಿ... ನಿಯಮ ಗೊತ್ತಾ?’ ವಿಜಯಾನಂದ ಅವರು ಲೆಕ್ಕಪತ್ರ ಶಾಖೆಗೆ ಭೇಟಿ ನೀಡಿದಾಗ ಊಟದ ಸಮಯ. ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು. ‘ಕನಿಷ್ಠ ಅರ್ಧದಷ್ಟು ಸಿಬ್ಬಂದಿಯಾದರೂ ಇರಬೇಕಲ್ಲ ಯಾಕೆ ಇಲ್ಲ?’ ಎಂದು ಪ್ರಶ್ನಿಸಿದರು. ಅಲ್ಲಿಂದ ಹೌಸಿಂಗ್ ವಿಭಾಗ ಪ್ರವೇಶಿಸಿದರು. ಅದೂ ಖಾಲಿ ಹೊಡೆಯುತ್ತಿತ್ತು. ವಿಭಾಗದ ಮ್ಯಾನೇಜರ್ ಅವರನ್ನು ಕರೆಯಿಸಿದ ವಿಜಯಾನಂದ ‘ಊಟದ ಸಮಯದಲ್ಲೂ ಅರ್ಧದಷ್ಟು ಸಿಬ್ಬಂದಿ ಕಚೇರಿಯಲ್ಲಿರಬೇಕು ಎಂಬುದು ನಿಯಮ. ಗೊತ್ತಿದೆಯಾ?. ಮನೆಯಿಂದ ಯಾರೂ ಊಟ ತರಲ್ವೇ? ಹೊರಗೇ ಊಟ ಮಾಡುತ್ತೀರಾ? ಇದು ಕೆಟ್ಟ ಚಾಳಿ ಬ್ಯಾಡ್ ಪ್ರ್ಯಾಕ್ಟೀಸ್’ ಎಂದರು.
‘ಸಮಸ್ಯೆ ನಿಮ್ಮ ಹಣೆಬರಹ...’ ‘ಇ–ಖಾತಾ ಸಂಬಂಧಿತ ಎಷ್ಟು ಅರ್ಜಿ ಇತ್ಯರ್ಥಕ್ಕೆ ಬಾಕಿ ಇವೆ?’ ಎಂದು ವಿಜಯಾನಂದ ಪ್ರಶ್ನಿಸಿದರು. ‘ಕಳೆದೊಂದು ವಾರದಿಂದ ಸಾಫ್ಟ್‌ವೇರ್ ಸಮಸ್ಯೆಯಿಂದ ತೊಂದರೆ ಆಗಿದ್ದು ಬಿಟ್ಟರೆ ಎಲ್ಲ ಅರ್ಜಿಗಳು ಇತ್ಯರ್ಥಗೊಂಡಿವೆ’ ಎಂದು ಅಧಿಕಾರಿಗಳು ಉತ್ತರಿಸಿದರು. ‘ಸಾಫ್ಟ್‌ವೇರ್ ಸಮಸ್ಯೆ ನಿಮ್ಮ ಹಣೆಬರಹ. ಜನ ಯಾಕೆ ತೊಂದರೆ ಅನುಭವಿಸಬೇಕು? ಸಮಸ್ಯೆ ಯಾವಾಗ ಸರಿಹೋಗುತ್ತೆ?’ ಎಂದು ಕೇಳಿದರು. ‘ಎರಡು ದಿನಗಳಲ್ಲಿ’ ಎಂದು ಅಧಿಕಾರಿ ಹೇಳಿದರು. ‘ಒಣಮರದಲ್ಲಿ ಗಿಳಿ ನೋಡಲು ಕಾಯುವಂತೆ ಜನ ಕಾಯಬೇಕಲ್ಲವೇ?’ ಎಂದು ಅವರು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.