ಕಾಳಗಿ ತಾಲ್ಲೂಕಿನ ಹಳೆ ಹೆಬ್ಬಾಳ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾರಿ ಪ್ರಮಾಣದ ನೆರೆ ಹಾವಳಿ ಉಂಟಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.
ಕಾಳಗಿ ತಾಲ್ಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇರಿಸಿದರು. ಗ್ರಾಮಸ್ಥರಿಗೆ ಸ್ಪಂದಿಸಿದ ಸಚಿವರು ಮಳೆ ತುಸು ಕಡಿಮೆಯಾದ ನಂತರ ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮದ ಸ್ಥಳಾಂತರಕ್ಕೆ ಮುಂದಾಗಿರುವುದಾಗಿ ಹೇಳಿದ ಸಚಿವರು, ಎಷ್ಟು ಕುಟುಂಬಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಗ್ರಾಮಸ್ಥರೊಂದಿಗೆ ಗ್ರಾಮಸಭೆ ನಡೆಸುವಂತೆ ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ ಅವರಿಗೆ ಸೂಚಿಸಿದರು. ಗ್ರಾಮಸ್ಥರಿಗೆ ಬೇಕಾಗುವ ಸೌಲಭ್ಯ ಒದಗಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ನಿರಂತರ ಮಳೆಯಿಂದ ಬೆಣ್ಣೆತೊರಾ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿರುವುದರಿಂದ ಗ್ರಾಮಸ್ಥರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.