ADVERTISEMENT

ಕಲಬುರಗಿ: ಗಾಣಗಾಪುರ, ಘತ್ತರಗಾ ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:43 IST
Last Updated 19 ಸೆಪ್ಟೆಂಬರ್ 2025, 6:43 IST
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಗುರುವಾರ ಮುಳುಗಡೆಯಾಗಿರುವುದು
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಗುರುವಾರ ಮುಳುಗಡೆಯಾಗಿರುವುದು   

ಕಲಬುರಗಿ: ಗುರುವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆ ಮತ್ತು ಮಹಾರಾಷ್ಟ್ರದ ಮೂರು ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹರಿಸಿದ್ದರಿಂದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಹಾಗೂ ಘತ್ತರಗಾ ಸೇತುವೆಗಳು ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. 

ಮಹಾರಾಷ್ಟ್ರದ ಉಜನಿ, ವೀರ್ ಹಾಗೂ ಸೀನಾ ಜಲಾಶಯಗಳು ಭರ್ತಿಯಾಗಿದ್ದರಿಂದ ಹೆಚ್ಚುವರಿ ನೀರನ್ನು(1.5 ಲಕ್ಷ ಕ್ಯೂಸೆಕ್‌) ಅಫಜಲಪುರದ ಸೊನ್ನ ಭೀಮಾ ಬ್ಯಾರೇಜ್‌ಗೆ ಹರಿಸಲಾಗುತ್ತಿದೆ. 25 ಗೇಟ್‌ಗಳ ಮೂಲಕ ಬ್ಯಾರೇಜ್‌ನಿಂದ ಭೀಮಾ ನದಿಗೆ ಹರಿಸುತ್ತಿರುವುದರಿಂದ ಎರಡೂ ಸೇತುವೆಗಳು ಮುಳುಗಡೆಯಾಗಿವೆ. ಜೊತೆಗೆ ತಾಲ್ಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನವು ಜಲಾವೃತವಾಗಿದೆ. 

ನದಿ ದಡದ ಶೇಷಗಿರಿ, ಮಣ್ಣೂರ, ಕುಡಗನೂರ, ಶಿವೂರ, ಉಡಚಣ, ಉಡಚಣಹಟ್ಟಿ, ಭೋಸಗಾ, ದುದ್ದುಣಗಿ, ಮಂಗಳೂರ, ಹಿರಿಯಾಳ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ.

ADVERTISEMENT

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದಿಂದ ಹಂಗರಗಾ (ಕೆ), ವಡಗೇರಾ ಗ್ರಾಮಕ್ಕೆ ತೆರಳುವ ರಸ್ತೆ ಮಳೆಗೆ ಸಂಪೂರ್ಣ ಜಲಾವೃತಗೊಂಡು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇಜೇರಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಕಲಬುರಗಿಯ ಬಿದ್ದಾಪುರ ಕಾಲೊನಿ ಸೇರಿದಂತೆ ಹಲವು ಬಡಾವಣೆಗಳು ಜಲಾವೃತವಾಗಿದ್ದವು.

ಬೀದರ್‌ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಗುರುವಾರ ನಸುಕಿನ ಜಾವದಿಂದ ಬೆಳಗಿನವರೆಗೆ ಮಳೆಯಾಗಿದೆ. ಜಿಲ್ಲೆಯ, ಔರಾದ್‌, ಭಾಲ್ಕಿಯಲ್ಲೂ ಮಳೆಯಾಗಿದೆ. ಬುಧವಾರ ತಡರಾತ್ರಿವರೆಗೂ ತನಕ ಉತ್ತಮವಾಗಿ ವರ್ಷಧಾರೆಯಾಗಿತ್ತು.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದ ಹತ್ತಿರ ಹಳ್ಳ ದಾಟಿ ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಗ್ರಾಮಸ್ಥರು ಹಗ್ಗ ಎಸೆದು ರಕ್ಷಣೆ ಮಾಡಿದ್ದಾರೆ. ಹಟ್ಟಿ ಚಿನ್ನದ ಗಣಿ ಸಮೀಪದ ಗೌಡೂರು, ಹೊಸಗುಡ್ಡ ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿದಿವೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಹಳ್ಳದ ನೀರು ರಸ್ತೆ ಮೇಲೆ ಹರಿದಿದ್ದರಿಂದ ನಾರಾಯಣಪುರ–ಹುಣಸಗಿ ಮಧ್ಯದ ಸಂಪರ್ಕ ಕಡಿತವಾಗಿದೆ. ಯಾದಗಿರಿ ನಗರ, ಶಹಾಪುರ, ಗುರುಮಠಕಲ್, ವಡಗೇರಾದಲ್ಲಿ ಉತ್ತಮ ಮಳೆಯಾಗಿದೆ.

ಕಲಬುರಗಿ ನಗರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬಿದ್ದಾಪುರ ಕಾಲೊನಿಯಲ್ಲಿ ಮಕ್ಕಳು ಮಳೆ ನೀರಿನಲ್ಲೇ ನಡೆದುಕೊಂಡು ಶಾಲೆಗೆ ತೆರಳಿದರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.