ADVERTISEMENT

ಕಲಬುರಗಿ | ಬಣ್ಣದ ಓಕುಳಿಗೆ ಕಲಬುರಗಿ ಸಜ್ಜು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:52 IST
Last Updated 4 ಮಾರ್ಚ್ 2026, 4:52 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಬಣ್ಣದ ಖರೀದಿ ಜೋರಾಗಿತ್ತು 
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಬಣ್ಣದ ಖರೀದಿ ಜೋರಾಗಿತ್ತು    

ಕಲಬುರಗಿ: ಬಣ್ಣದ ಹಬ್ಬ ಹೋಳಿ ಆಚರಣೆಗೆ ನಗರ ಸೇರಿದಂತೆ ಇಡೀ ಜಿಲ್ಲೆ ಸಜ್ಜಾಗಿದೆ. ಹೋಳಿ ಹುಣ್ಣಿಮೆ ಅಂಗವಾಗಿ ಬಹುತೇಕ ಕಡೆ ಮಂಗಳವಾರವೇ ಕಾಮದಹನ ನಡೆದಿದ್ದು, ಬುಧವಾರ ‘ಬಣ್ಣ’ದಾಟ ರಂಗೇರಲಿದೆ. ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಲು ಕಾತರರಾಗಿದ್ದಾರೆ.

ನಗರದ ಸೂಪರ್ ಮಾರ್ಕೆಟ್, ಹೊಸ ಬಸ್ ನಿಲ್ದಾಣ, ರಾಮಮಂದಿರ ಸರ್ಕಲ್, ಜೇವರ್ಗಿ ಕ್ರಾಸ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ‘ಹೋಳಿ ಹಬ್ಬ’ದ ಕಳೆ ಎದ್ದು ಕಾಣುತ್ತಿದೆ. ಬಣ್ಣ, ಗುಲಾಲು, ವಾಟರ್ ಗನ್, ವಿಭಿನ್ನ ಆಕಾರದ ಪಿಚಕಾರಿಗಳು, ಹುಲಿ, ಸಿಂಹ, ಜೋಕರ್ ಮುಖವಾಡಗಳು, ಬಣ್ಣ ತುಂಬಿ ಎಸೆಯುವ ಬಲೂನು, ದೊಡ್ಡ ಮೀಸೆ, ದಾಡಿ, ಬಣ್ಣದ ಟೊಪ್ಪಿಗೆಗಳ ಮಾರಾಟ ಮಂಗಳವಾರ ಭರ್ಜರಿ ನಡೆಯಿತು.

ನಗರದ ಮಾರುಕಟ್ಟೆಗಳಲ್ಲಿ ಬಣ್ಣವಾಡಲು ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಮಂಗಳವಾರ ಕಂಡು ಬಂತು. ನಗರದ ಸೂಪರ್ ಮಾರ್ಕೆಟ್, ಜಗತ್ ವೃತ್ತ ಮತ್ತು ಪ್ರಮುಖ ರಸ್ತೆಗಳಲ್ಲಿ ‘ಹೋಳಿ ಹಬ್ಬ’ದ ಕಳೆ ಎದ್ದು ಕಾಣುತ್ತಿದೆ.

ADVERTISEMENT

ಬಹುತೇಕರು ರಾಸಾಯನಿಕ ಬಣ್ಣಗಳಿಗಿಂತಲೂ ಹೆಚ್ಚಾಗಿ ಸಾವಯವ ಬಣ್ಣಗಳ ಖರೀದಿಗೆ ಆಸಕ್ತಿ ತೋರಿದರು. ಹಲವರು ಬಗೆ–ಬಗೆಯ ಬಣ್ಣದ ಪುಡಿ ಪ್ಯಾಕೆಟ್‌ಗಳನ್ನು ಖರೀದಿಸಿದರೆ, ಕೆಲವರು ಕೆ.ಜಿಗಟ್ಟಲೇ ಬಣ್ಣ ಖರೀದಿಸಿದರು.

ಮಕ್ಕಳಿಗಾಗಿ ಕಾರ್ಟೂನ್‌ಗಳಿರುವ ಪ್ರೆಷರ್ ಗನ್ ಮಾದರಿಯ ಪಿಚಕಾರಿಗಳ ಮಾರಾಟ ಜೋರಾಗಿತ್ತು. ಬಣ್ಣದಾಟದಲ್ಲಿ ಧರಿಸಲು ಭೂತ, ಪ್ರಾಣಿಗಳು ಮತ್ತು ರಾಜಕೀಯ ವ್ಯಕ್ತಿಗಳ ಮುಖವಾಡಗಳ ಮಾರಾಟವೂ ಭರ್ಜರಿ ನಡೆಯಿತು. ಹಬ್ಬದ ಮೋಜನ್ನು ಹೆಚ್ಚಿಸಲು ವಿವಿಧ ಬಣ್ಣಗಳ ಕೃತಕ ಕೂದಲುಗಳನ್ನು ಯುವಕರು ಖರೀದಿಸಿದ್ದು ಕಂಡು ಬಂತು.

ಕಾಮದಹನಕ್ಕಾಗಿ ಕಟ್ಟಿಗೆ, ಒಣಗಿದ ಸೆಗಣಿ ಬೆರಣಿ, ತೆಂಗಿನಕಾಯಿ ಮತ್ತು ಹೂವುಗಳ ಖರೀದಿಯೂ ನಡೆಯಿತು. ನಗರದ ಅನೇಕ ಬಡಾವಣೆಗಳಲ್ಲಿ ರಾತ್ರಿ ಕಾಮ ದಹನ ಮಾಡಲಾಯಿತು.

ಗಡಿಗೆ ಒಡೆಯುವ ಸ್ವರ್ಧೆ: ಬಣ್ಣದಾಟದ ಅಂಗವಾಗಿ ನಗರದ ವಿವಿಧೆಡೆ ಬುಧವಾರ ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ಕೆಲವು ಕಡೆ ರೇನ್ ಡ್ಯಾನ್ಸ್ ಕೂಡ ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಶಾಂತಿ ಸಭೆ ಸೇರಿದಂತೆ ಮಾರ್ಚ್‌ 3ರ ಮಧ್ಯಾಹ್ನ 3 ಗಂಟೆಯಿಂದ ಮಾರ್ಚ್‌ 4ರ ಮಧ್ಯರಾತ್ರಿ 12 ರವರೆಗೆ ಕಲಬುರಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಬಗೆಯ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.

ಹೋಳಿ ಹುಣ್ಣಿಮೆ ಅಂಗವಾಗಿ ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಮಂಗಳವಾರ ಬಾಲಕನೊಬ್ಬ ಪಿಚಕಾರಿ ಖರೀದಿಗೆ ಮುಂದಾಗಿರುವುದು

ಹೋಳಿ ಸಡಗರ: ಪೊಲೀಸ್‌ ಬಿಗಿಭದ್ರತೆ

ಕಲಬುರಗಿ ನಗರದ 290ಕ್ಕೂ ಅಧಿಕ ಕಡೆಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟದ ಸಂಭ್ರಮಾಚರಣೆ ನಡೆಯಲಿದೆ. ಗೃಹ ರಕ್ಷಕ ಕೆಎಸ್‌ಆರ್‌ಪಿ ಸಿಎಆರ್‌ ಪಡೆಗಳನ್ನು ವಿಶೇಷ ಭದ್ರತೆಗೆ ನಿಯೋಜಿಸಲಾಗಿದೆ. ಅಧಿಕಾರಿಗಳು ಸೇರಿದಂತೆ ಒಟ್ಟು 1500ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಸಂಭ್ರಮಾಚರಣೆ ಮೇಲೆ ನಿಗಾ ಇರಿಸಲಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷರ್‌ ಶರಣಪ್ಪ ಎಸ್‌.ಡಿ. ಹೇಳಿದರು. ‘ಸಾರ್ವಜನಿಕರು ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಬೇಕು. ಸದ್ಯಕ್ಕೆ ಪಿಯು ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.