
ಕಲಬುರಗಿ: ಸಕಾಲಕ್ಕೆ ನಡೆಯದ ಬಡ್ತಿ ಪ್ರಕ್ರಿಯೆ, ದೋಷಪೂರಿತ ಜ್ಯೇಷ್ಠತಾ ಪಟ್ಟಿ ತಯಾರಿಕೆ ಸೇರಿದಂತೆ ಜಿಲ್ಲೆಯಲ್ಲಿರುವ 62 ಕಾಲೇಜುಗಳ ಪೈಕಿ 38 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಭಾರ ಪ್ರಾಚಾರ್ಯರೇ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
‘ಪ್ರಭಾರ’ ಪ್ರಾಚಾರ್ಯರಿಗೆ ಬೇರೆ ಕಾಲೇಜುಗಳ ಹೊಣೆಯೂ ಇರುವುದರಿಂದ ಉಪನ್ಯಾಸ ಹಾಗೂ ಆಡಳಿತದಲ್ಲಿ ಹೆಚ್ಚಿನ ಗಮನ ನೀಡುವುದು ಆಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮತ್ತೊಂದೆಡೆ ಸುಮಾರು 25ರಿಂದ 28 ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರೂ ಅವರಿಗೆ ಜ್ಯೇಷ್ಠತಾ ಪಟ್ಟಿಯಲ್ಲಿ ಸ್ಥಾನ ಸಿಗದೇ ಇದ್ದುದರಿಂದ ಇಡೀ ಸೇವಾವಧಿಯಲ್ಲಿ ಒಂದೇ ಒಂದು ಬಡ್ತಿಯನ್ನೂ ಪಡೆಯದೇ ನಿವೃತ್ತರಾದವರೂ ಇದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಲ್ಯಾಣ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಬಡ್ತಿ ಪಟ್ಟಿಯ ದೋಷಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ, ‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 220 ಪ್ರಾಚಾರ್ಯರ ಹುದ್ದೆಗಳು ಮಂಜೂರಾಗಿವೆ. ಅವುಗಳ ಪೈಕಿ 101 ಹುದ್ದೆಗಳಿಗೆ ಪ್ರಾಚಾರ್ಯರಿದ್ದು, 119 ಖಾಲಿ ಹುದ್ದೆಗಳಿವೆ. ಅವುಗಳನ್ನು ಭರ್ತಿ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ಉಪನ್ಯಾಸಕರ ಸೇವಾ ಹಿರಿತನ ಆಧರಿಸಿ ಪದೋನ್ನತಿ ನೀಡಿ ಕಾಲೇಜುಗಳಿಗೆ ನಿಯೋಜಿಸಬೇಕು. ಆದರೆ, ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸುವಾಗ ಈಗಾಗಲೇ ಪ್ರಾಚಾರ್ಯರಾಗಿರುವವರು, ನೀಡಲಾದ ಕಾಲೇಜುಗಳಿಗೆ ಹಾಜರಾಗದೇ ಇರುವವರ ಹೆಸರುಗಳನ್ನು ಕೈಬಿಡಬೇಕಿತ್ತು. ಆದರೆ, ಕೆಲ ಪ್ರಕರಣಗಳಲ್ಲಿ ಪರಿಷ್ಕರಣೆ ಮಾಡದೇ ಇರುವುದರಿಂದ ಬಡ್ತಿಗಾಗಿ ಕಾಯುತ್ತಿರುವವರು ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿಲ್ಲ. ಈ ಸಮಸ್ಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಇಲಾಖೆ ನಿರ್ದೇಶಕರು ತುರ್ತಾಗಿ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಪರಿಸ್ಥಿತಿ ಶೋಚನೀಯವಾಗಿದ್ದು, ಮಂಜೂರಾದ 42 ಪ್ರಾಚಾರ್ಯರ ಹುದ್ದೆಗಳ ಪೈಕಿ ಎಂಟು ಪ್ರಾಚಾರ್ಯರು ವಿವಿಧ ಕಾಲೇಜುಗಳಿಗೆ ನಿಯೋಜನೆಗೊಂಡಿದ್ದಾರೆ. ಉಳಿದ ಹುದ್ದೆಗಳನ್ನು ಬಡ್ತಿಯ ಮೂಲಕ ಭರ್ತಿ ಮಾಡಬೇಕಿದೆ.
ದಶಕಗಳಿಂದ ಕಲ್ಯಾಣ ಕರ್ನಾಟಕದ ಉಪನ್ಯಾಸರು ಬಡ್ತಿಗಾಗಿ ಕಾಯುತ್ತಿದ್ದಾರೆ. ಇಲಾಖೆಯು ಆರು ತಿಂಗಳಿಗೊಮ್ಮೆ ಬಡ್ತಿ ಪ್ರಕ್ರಿಯೆ ನಡೆಸಿದರೆ ಅರ್ಹರಿಗೆ ಪ್ರಾಚಾರ್ಯ ಹುದ್ದೆ ಸಿಗುತ್ತದೆ. ಆದಷ್ಟು ಶೀಘ್ರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕುಚಂದ್ರಶೇಖರ ದೊಡ್ಡಮನಿ ಅಧ್ಯಕ್ಷ ಕ.ಕ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ
ಕಲಬುರಗಿ ಜಿಲ್ಲೆಯ 62 ಕಾಲೇಜುಗಳಲ್ಲಿ 24 ಕಾಲೇಜುಗಳಿಗೆ ಪೂರ್ಣಾವಧಿ ಪ್ರಾಚಾರ್ಯರಿದ್ದಾರೆ. ಉಳಿದ 38 ಕಾಲೇಜುಗಳಲ್ಲಿ ಪ್ರಭಾರ ಪ್ರಾಚಾರ್ಯರಿದ್ದಾರೆ. ಇಲಾಖೆಗೆ ಜ್ಯೇಷ್ಠತಾ ಪಟ್ಟಿಯನ್ನು ಕಳುಹಿಸಲಾಗಿದೆಸುರೇಶ ಅಕ್ಕಣ್ಣ ಡಿಡಿಪಿಯು ಕಲಬುರಗಿ
‘ಪ್ರಭಾರ’ ಪ್ರಾಚಾರ್ಯರಿಗೆ ಹೆಚ್ಚುವರಿ ಭತ್ಯೆ
ಕಲ್ಯಾಣ ಕರ್ನಾಟಕದ 119 ಕಾಲೇಜುಗಳಿಗೆ ಸದ್ಯ ಪ್ರಭಾರ ಪ್ರಾಚಾರ್ಯರಿದ್ದು ಅವರಿಗೆ ಅವರ ವೇತನದ ಜೊತೆಗೆ ಶೇ 8ರಷ್ಟು ಹೆಚ್ಚುವರಿ ಭತ್ಯೆಯನ್ನು ಕೊಡಲಾಗುತ್ತಿದೆ. ಅಂದರೆ ಸರಾಸರಿ ಒಬ್ಬರು ಪ್ರಭಾರ ಪ್ರಾಚಾರ್ಯರಿಗೆ ಮಾಸಿಕ ₹15 ಸಾವಿರ ಭತ್ಯೆಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಕಾಯಂ ಪ್ರಾಚಾರ್ಯರ ನೇಮಕವಾದರೆ ಅವರಿಗೆ ಒಂದು ಇನ್‌ಕ್ರಿಮೆಂಟ್ ಹಣ ಅಂದಾಜು ₹ 3 ಸಾವಿರ ಮಾತ್ರ ನೀಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.