ADVERTISEMENT

ಕಲಬುರಗಿ: ಎರಡೇ ವಾರದಲ್ಲಿ 334 ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ ಮುಂಗಾರು ಮಳೆ ಸೃಷ್ಟಿಸಿದ ಅವಾಂತರ; ಕೃಷಿ, ತೋಟಗಾರಿಕೆ ಬೆಳೆಗೂ ಹಾನಿ

ಬಸೀರ ಅಹ್ಮದ್ ನಗಾರಿ
Published 2 ಸೆಪ್ಟೆಂಬರ್ 2025, 4:57 IST
Last Updated 2 ಸೆಪ್ಟೆಂಬರ್ 2025, 4:57 IST
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಿರಾಳ(ಕೆ) ಗ್ರಾಮದಲ್ಲಿ ಹಳ್ಳದ ಪ್ರವಾಹದಿಂದ ನೆಲ ಕಚ್ಚಿದ ಪಪ್ಪಾಯ ಗಿಡಗಳು – ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಿರಾಳ(ಕೆ) ಗ್ರಾಮದಲ್ಲಿ ಹಳ್ಳದ ಪ್ರವಾಹದಿಂದ ನೆಲ ಕಚ್ಚಿದ ಪಪ್ಪಾಯ ಗಿಡಗಳು – ಪ್ರಜಾವಾಣಿ ಚಿತ್ರ   

ಕಲಬುರಗಿ: ಮುಂಗಾರು ಮಳೆ ಅಬ್ಬರಕ್ಕೆ ಬಿಸಿಲುನಾಡು ಕಲಬುರಗಿ ತತ್ತರಿಸಿದ್ದು, ವ್ಯಾಪಕ ಮಳೆಯಿಂದ ಬೆಳೆಗಳೊಂದಿಗೆ ನೂರಾರು ಮನೆಗಳಿಗೂ ಹಾನಿಯಾಗಿದೆ.

ಜೂನ್‌ 1ರಿಂದ ಆಗಸ್ಟ್‌ 31ರ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 406 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 485 ಮಿ.ಮೀ ಮಳೆ ಸುರಿದಿದೆ. ಅದರಲ್ಲೂ ಆಗಸ್ಟ್‌ನಲ್ಲಿ ವಾಡಿಕೆಯಂತೆ 156 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 263 ಮಿ.ಮೀ ಮಳೆ ಸುರಿದಿದ್ದು, ಶೇ69ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್‌ ದ್ವಿತೀಯಾರ್ಧ ಅವಧಿಯಲ್ಲಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ (108 ಮಿ.ಮೀ) ಮಳೆಯು ಹಾನಿಯ ಪ್ರಮಾಣವನ್ನು ಹೆಚ್ಚಿಸಿದೆ.

ಜೂನ್‌ 1ರಿಂದ ಆಗಸ್ಟ್‌ 31ರ ಅವಧಿಯಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಮನೆಗಳ ಗೋಡೆ ಕುಸಿದು ಅಫಜಲಪುರ ತಾಲ್ಲೂಕು ಹಾಗೂ ಜೇವರ್ಗಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಮೃತಪ್ಟಟಿದ್ದಾರೆ. 6 ದೊಡ್ಡ ಪ್ರಾಣಿಗಳು ಹಾಗೂ 21 ಚಿಕ್ಕ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜಿಲ್ಲೆಯಲ್ಲಿ ಬರೋಬ್ಬರಿ 575 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಈ ಪೈಕಿ ಎರಡೇ ವಾರದಲ್ಲಿ 334 ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಜಿಲ್ಲೆಯಲ್ಲಿ ಮಳೆ ನೀರು, ಪ್ರವಾಹ ನೀರು ಹೊಕ್ಕು 841 ಮನೆಗಳಲ್ಲಿ ಪಾತ್ರೆಗಳು, ಬಟ್ಟೆಗಳು, ಧಾನ್ಯಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ನೀಡಿರುವ ಅಂಕಿ–ಅಂಶಗಳು ಹೇಳಿವೆ.

‘ನಿರಂತರ ಮಳೆಗೆ ನಮ್ಮ ಹಳೆಯ ಮನೆಯ ಗೋಡೆ ಬಿದ್ದಿದ್ದು, ಅದು ಬಳಕೆಗೆ ಬಾರದಂತಾಗಿದೆ. ಅದರಲ್ಲಿದ್ದ ದವಸ ಧಾನ್ಯಗಳನ್ನು ಮತ್ತೊಂದು ಮನೆಗಳ ಸ್ಥಳಾಂತರಿಸಿದ್ದೇವೆ. ಅದರಿಂದ ಈಗಿರುವ ಮನೆ ಇಕ್ಕಟ್ಟಾಗುತ್ತಿದೆ. ಸರ್ಕಾರ ಕೂಡಲೇ ಮನೆ ಬಿದ್ದ ಮನೆಗಳಿಗೆ ಪರಿಹಾರ ವಿತರಿಸಬೇಕು’ ಎಂದು ಜೇವರ್ಗಿ ತಾಲ್ಲೂಕಿನ ಬಿರಾಳ(ಕೆ) ಗ್ರಾಮಸ್ಥರೊಬ್ಬರು ಒತ್ತಾಯಿಸಿದರು.

92 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ

ಕಲಬುರಗಿ ಜಿಲ್ಲೆಯಲ್ಲಿ ಸುರಿದ ವ್ಯಾಪಕವಾದ ಮುಂಗಾರು ಮಳೆಗೆ ಹಣ್ಣು ಹಾಗೂ ತರಕಾರಿ ಬೆಳೆಗಳು ತತ್ತರಿಸಿವೆ. ಜೂನ್‌ 1ರಿಂದ ಆಗಸ್ಟ್‌ 31ರ ಅವಧಿಯಲ್ಲಿ ಬರೋಬ್ಬರಿ 92.34 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಗರಿಷ್ಠ 29.40 ಹೆಕ್ಟೇರ್‌ ಹಾಗೂ ಕಲಬುರಗಿ ತಾಲ್ಲೂಕಿನಲ್ಲಿ 25 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಒಟ್ಟಾರೆಯಾಗಿ ಹಾನಿ ಪೈಕಿ ಗರಿಷ್ಠ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು 32.15 ಹೆಕ್ಟೇರ್‌ನಷ್ಟು ಉಳ್ಳಾಗಡ್ಡಿ ಬೆಳೆ ನೆಲಕಚ್ಚಿದೆ. ಜಿಲ್ಲೆಯಲ್ಲಿ ತರಕಾರಿಗಳ ಪೈಕಿ 10.10 ಹೆಕ್ಟೇರ್‌ನಷ್ಟು ಟೊಮೆಟೊ ಬೆಳೆ 5.90 ಹೆಕ್ಟೇರ್‌ನಷ್ಟು ಮೆಣಸಿನಕಾಯಿ 2.60 ಹೆಕ್ಟೇರ್‌ನಷ್ಟು ಬೆಂಡೆಕಾಯಿ 1.80 ಹೆಕ್ಟೇರ್‌ ಬದನೆಕಾಯಿ 1.20 ಹೆಕ್ಟೇರ್‌ನಷ್ಟು ತುಪ್ಪದ ಹೀರೆಕಾಯಿ ಮುಂಗಾರು ಮಳೆಗೆ ಆಹುತಿಯಾಗಿದೆ. ಹಣ್ಣುಗಳ ಪೈಕಿ ಜಿಲ್ಲೆಯಲ್ಲಿ ಒಟ್ಟು15.80 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯ ಬೆಳೆ ನೆಲಕಚ್ಚಿದೆ. ಇದಲ್ಲದೇ 4.80 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕಲ್ಲಂಗಡಿ 4.14 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬಾಳೆ 2 ಹೆಕ್ಟೇರ್‌ನಷ್ಟು ಡ್ರ್ಯಾಗನ್‌ ಫ್ರುಟ್‌ ಅಲ್ಪ ಪ್ರಮಾಣದಲ್ಲಿ ನಿಂಬೆ ಪೇರಲೆ ಬೆಳೆಗಳಿಗೆ ಹಾನಿಯಾಗಿದೆ. ಪುಷ್ಪ ಕೃಷಿಯ ಪೈಕಿ ಜಿಲ್ಲೆಯಲ್ಲಿ 3.20 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಗುಲಾಬಿ 2.95 ಹೆಕ್ಟೇರ್‌ನಷ್ಟು ಚೆಂಡು ಹೂವು 1.80 ಹೆಕ್ಟೇರ್‌ನಷ್ಟು ಸೇವಂತಿ ಪುಷ್ಪ ಬೆಳೆಯು ಅಬ್ಬರದ ಮುಂಗಾರು ಮಳೆಗೆ ಬಲಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.