
ಕಲಬುರಗಿ: ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ನಗರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಮಾರ್ಚ್ 5ರಿಂದ ಹೆಲ್ಮೆಟ್ ಕಡ್ಡಾಯ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಸಂಚಾರ ವಿಭಾಗದ ನೂತನ ಎಸಿಪಿ ಪ್ರಭು ಡಿ.ಟಿ. ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ವಾಹನ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದ ಕಾರಣ 50ಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಹಲವು ವರ್ಷಗಳು ಕಳೆದಿವೆ. ಆದರೆ, ಜಿಲ್ಲೆಯಲ್ಲಿ ಬಿಸಿಲಿನ ಕಾರಣಕ್ಕೆ ಹಲವು ದಿನಗಳಿಂದ ಸಂಪೂರ್ಣ ಜಾರಿ ಆಗಿರಲಿಲ್ಲ. ಆದರೆ, ಅಪಘಾತ ಮತ್ತು ಅದರಲ್ಲಿನ ತಲೆಗೆ ಪೆಟ್ಟು ಬಿದ್ದು ಮೃತಪಡುವವರ ಸಂಖ್ಯೆ ನೋಡಿಕೊಂಡು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಂಡು ವಾಹನ ಚಾಲನೆ ಮಾಡಬೇಕು ಎಂದು ಹೇಳಿದರು.
ಜಾಗೃತಿ ನಂತರ ದಂಡ: ಕಳೆದ ಹಲವು ದಿನಗಳಿಂದ ನಗರದಲ್ಲಿ ಬೈಕ್, ಸ್ಕೂಟರ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗುವುದು. ಜಾಗೃತಿ ಮೂಡಿಸಲಾಗುವುದು. ಮಾರ್ಚ್ 5ರಿಂದ ನಿಯಮ ಪಾಲನೆ ಮಾಡದವರಿಗೆ ಕಾನೂನಿನಂತೆ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಸಂಚಾರ ನಿಯಮಗಳನ್ನು ಪ್ರಯಾಣಿಕರು ಪಾಲನೆ ಮಾಡಿದರೆ ಮಾತ್ರ ಸಂಚಾರ ಸುಗಮವಾಗುತ್ತದೆ. ನಾವೆಷ್ಟೇ ದಂಡ ಹಾಕಿದರೂ ತಪ್ಪುಗಳು ಮರುಕಳಿಸುತ್ತಿವೆ. ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು. ಸಿಗ್ನಲ್‌ನಲ್ಲಿ ಹಸಿರು ದೀಪ ಬೆಳಗುವ ಮುನ್ನವೇ ವಾಹನ ಚಲಾವಣೆ ಮಾಡುವುದು. ಒನ್ ವೇನಲ್ಲಿ ಎದುರಿನಿಂದ ವಾಹನ ಚಲಾವಣೆ ಮಾಡಿದವರು ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ಶಕೀಲ್ ಅಹ್ಮದ್ ಅಂಗಡಿ, ಶಿವಾನಂದ ವಾಲೀಕಾರ ಇದ್ದರು.
ನಿತ್ಯ ಸುಮಾರು 10 ಸಾವಿರ ಇ ಚಲನ್ ಮೂಲಕ ದಂಡ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಇದುವರೆಗೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ₹ 56 ಲಕ್ಷ ದಂಡ ಸಂಗ್ರಹ ಮಾಡಲಾಗಿದೆಪ್ರಭು ಡಿ.ಟಿ. ಸಂಚಾರ ವಿಭಾಗದ ಎಸಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.