ADVERTISEMENT

ಕಲಬುರಗಿ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಮಂದಗತಿ

ಬಸೀರ ಅಹ್ಮದ್ ನಗಾರಿ
Published 10 ನವೆಂಬರ್ 2025, 4:41 IST
Last Updated 10 ನವೆಂಬರ್ 2025, 4:41 IST
ಚಿತ್ತಾಪುರ ತಾಲ್ಲೂಕಿನ ಹೊಲವೊಂದರಲ್ಲಿ ಬಿತ್ತಿರುವ ಕಡಲೆಗೆ ಈಗ ಚಿಗುರೆಲೆ ಮೂಡಿರುವುದು
ಚಿತ್ತಾಪುರ ತಾಲ್ಲೂಕಿನ ಹೊಲವೊಂದರಲ್ಲಿ ಬಿತ್ತಿರುವ ಕಡಲೆಗೆ ಈಗ ಚಿಗುರೆಲೆ ಮೂಡಿರುವುದು   

ಕಲಬುರಗಿ: ಜಿಲ್ಲೆಯಲ್ಲಿ ಮಳೆ ನಿಂತರೂ ಭೂಮಿಯಲ್ಲಿನ ತೇವಾಂಶ ಇನ್ನೂ ಆರಿಲ್ಲ. ಚುರುಕಿನ ಬಿಸಿಲಿನ ಹೊರತಾಗಿಯೂ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಮಂದಗತಿಯಲ್ಲಿ ಸಾಗಿದೆ.

ಜಿಲ್ಲೆಯ ಪ್ರಸಕ್ತ ಹಿಂಗಾರು ಅವಧಿಯಲ್ಲಿ ಒಟ್ಟು 2.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಆ ಪೈಕಿ ನ.9ರ ತನಕ ಶೇ 54.40ರಷ್ಟು ಪ್ರದೇಶದಲ್ಲಿ ಮಾತ್ರವೇ ಬಿತ್ತನೆ ಪೂರ್ಣಗೊಂಡಿದೆ.

21,362 ಹೆಕ್ಟೇರ್‌ಗಳಷ್ಟು ನೀರಾವರಿ ಜಮೀನಿನ ಪೈಕಿ 8,621 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. 2,17,503 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದ ಪೈಕಿ 1,29,937 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

ADVERTISEMENT

ಜಿಲ್ಲೆಯಲ್ಲಿ ಕಾಳಗಿ ತಾಲ್ಲೂಕಿನಲ್ಲಿ ಗರಿಷ್ಠ ಶೇ 80.26ರಷ್ಟು (11,500 ಹೆಕ್ಟೇರ್‌) ಹಾಗೂ ಆಳಂದದಲ್ಲಿ ಕನಿಷ್ಠ ಶೇ21.97ರಷ್ಟು (9,900 ಹೆಕ್ಟೇರ್‌) ಬಿತ್ತನೆಯಾಗಿದೆ.

ಜಿಲ್ಲೆಯ ಸಾವಿರಾರು ರೈತರು ಹಿಂಗಾರು ಬಿತ್ತನೆಗಾಗಿ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದ್ದು, ಭೂಮಿ ಬಿತ್ತನೆಯ ಹದಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಬಿತ್ತನೆ ತಡವಾದರೆ ಮುಂದೆ ರಾಶಿಯ ಕಾಲಕ್ಕೆ ಬೆಳೆಗಳಿಗೆ ರೋಗ ಬಾಧೆ, ತೇವಾಂಶ ಕೊರತೆ ಕಾಡಬಹುದು. ಜೋಳಕ್ಕೆ ಹಕ್ಕಿಗಳ ಕಾಟವೂ ಎದುರಿಸಬೇಕಾಗುತ್ತದೆ ಎಂಬುದು ರೈತರ ಅಳಲು.

‘ಎಂಟು ಎಕರೆ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವೆ. ತಲಾ ನಾಲ್ಕು ಎಕರೆ ಪ್ರದೇಶದಲ್ಲಿ ಬಿತ್ತನೆ ನಡೆಸಲು ಕಡಲೆ ಹಾಗೂ ಜೋಳದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿರುವೆ. ಆದರೆ, ಭೂಮಿಯಲ್ಲಿನ ತೇವಾಂಶವೇ ಆರುತ್ತಿಲ್ಲ. ಭೂಮಿ ಹದಕ್ಕೆ ಬಂತು ಎನ್ನುವಷ್ಟರಲ್ಲಿ ಮತ್ತೆ–ಮತ್ತೆ ಮಳೆ ಸುರಿಯುತ್ತಿದೆ. ಇದರಿಂದ ಹೊಲದಲ್ಲಿ ಬೆಳೆದ ಕಸವನ್ನೂ ಶುಚಿಗೊಳಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ಹೊಲಕ್ಕೆ ಹೋಗಿ ಹದ ನೋಡಿಕೊಂಡು ಬರುವುದೇ ಕೆಲಸವಾಗಿದೆ’ ಎನ್ನುತ್ತಾರೆ ಕಾಳಗಿ ತಾಲ್ಲೂಕಿನ ಗೋಣಗಿ ಗ್ರಾಮದ ಪ್ರಗತಿಪರ ರೈತ ಶಿವರಾಜ ಪಾಟೀಲ.

‘ಪ್ರತಿ ಸಲ ಉತ್ತರಿ ಮಳೆಗೆ ಹಿಂಗಾರಿ ಜೋಳ–ಕಡಲೆ ಬಿತ್ತನೆ ಮಾಡುತ್ತಿದ್ದೆವು. ಆದರೆ, ಈ ಸಲ ಅತಿಯಾಗಿ ಮಳೆಯಾಗಿದ್ದರಿಂದ ಹಿಂಗಾರು ಬಿತ್ತನೆ ಬಹಳ ತಡವಾಗಿದೆ. ನಿರಂತರ ಮಳೆಯಿಂದ ಹೊಲದಲ್ಲಿ ಕಸ ಬೆಳೆದಿದ್ದು, ಅದನ್ನು ಶುಚಿಗೊಳಿಸದೇ ಬಿತ್ತುವ ಸ್ಥಿತಿಯೇ ಇಲ್ಲ. ಕಳೆದೊಂದು ವಾರದಿಂದ ಚುರುಕಿನ ಬಿಸಿಲಿದ್ದು, ಈಗ ಜಮೀನು ಹದಕ್ಕೆ ಬರುತ್ತಿದೆ. ಒಂದಿಷ್ಟು ಭೂಮಿಯಲ್ಲಿ ಜೋಳ ಬಿತ್ತಿದ್ದು, ಇನ್ನೂ ನಾಲ್ಕು ಎಕರೆ ಬಿತ್ತನೆ ಮಾಡಬೇಕಿದೆ. ತೇವಾಂಶ ಆರಿದ ಕೂಡಲೇ ಜೋಳ–ಕಡಲೆ ಬಿತ್ತಲು ಸಿದ್ಧತೆ ಮಾಡಿಕೊಂಡಿರುವೆ’ ಎಂದು ಜೇವರ್ಗಿ ತಾಲ್ಲೂಕಿನ ರೈತ ನಾನಾಗೌಡ ಪಾಟೀಲ ಹೇಳಿದರು.

ಜಿಲ್ಲೆಯಲ್ಲಿ ತೇವಾಂಶ ಆರದ ಕಾರಣ ಬಿತ್ತನೆಗೆ ತೊಡಕಾಗಿದೆ. ನ.15ರ ತನಕ ಜೋಳ ಕಡಲೆಯನ್ನು ರೈತರು ಬಿತ್ತನೆ ನಡೆಸಬಹುದು
ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ
ಎಂಟು ಎಕರೆಯಲ್ಲಿ ಬಿತ್ತನೆಗೆ ಬೀಜ ಗೊಬ್ಬರ ತಂದಿಟ್ಟುಕೊಂಡಿರುವೆ. ತೇವಾಂಶ ಆರದ ಕಾರಣ ಇನ್ನೂ ಬಿತ್ತನೆ ಸಾಧ್ಯವಾಗಿಲ್ಲ
ಶಿವರಾಜ ಪಾಟೀಲ ಗೋಣಗಿ ಪ್ರಗತಿಪರ ರೈತ ಕಾಳಗಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.