
ಕಲಬುರಗಿ: ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಅಗತ್ಯ ಮೂಲಸೌಲಭ್ಯಗಳಿಲ್ಲದಿದ್ದರೂ, ಪ್ರತಿಭೆಗಳ ಸಾಧನೆಯ ಹೆಜ್ಜೆಗಳು ಒಂದೊಂದಾಗಿ ಮೂಡುತ್ತಿವೆ. ಜಿಲ್ಲೆಯ ಕಿರಿಯ ಹಾಕಿಪಟುಗಳಾದ ಹರ್ಷವರ್ಧನ, ಕಿಶೋರ ಮತ್ತು ಸಮರ್ಥ, 14 ವರ್ಷದೊಳಗಿನವರ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿ ಮಧ್ಯಪ್ರದೇಶದ ಗುಣಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿರುವ ಹರಕುಮುರುಕಾದ ಅಂಗಣದಲ್ಲೇ ನಿರಂತರ ಅಭ್ಯಾಸ ಹಾಗೂ ಪರಿಶ್ರಮ ವಹಿಸಿದ್ದಕ್ಕೆ ದೊರೆತ ಪ್ರತಿಫಲ ಇದು.
ಹಾಸನದಲ್ಲಿ ನವೆಂಬರ್ 21ರಿಂದ 23ರವರೆಗೆ ನಡೆದ 14 ವರ್ಷದೊಳಗಿನವರ ರಾಜ್ಯಮಟ್ಟದ ಸ್ಕೂಲ್ ಗೇಮ್ಸ್‌ನ ಹಾಕಿ ಟೂರ್ನಿಯಲ್ಲಿ ಕಲಬುರಗಿ ವಿಭಾಗ ತಂಡವು ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಜಯಿಸಿತ್ತು. ಈ ತಂಡದಲ್ಲಿ ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಹಾಸ್ಟೆಲ್‌ನ 7 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಮೂವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿ ವಿಭಾಗ ತಂಡವು ಟೂರ್ನಿಯಲ್ಲಿ ಕೂಡಿಗೆ ತಂಡ, ಬೆಂಗಳೂರು ವಿಭಾಗ ತಂಡ, ಮೈಸೂರು ವಿಭಾಗ ತಂಡ ಹಾಗೂ ಬೆಳಗಾವಿ ವಿಭಾಗ ತಂಡಗಳನ್ನು ಸೋಲಿಸಿ, 12 ಅಂಕಗಳನ್ನು ಕಲೆಹಾಕುವ ಮೂಲಕ ಪ್ರಶಸ್ತಿ ಜಯಿಸಿತ್ತು.
ಮೊದಲ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕರ ಕುಟುಂಬಗಳ ಹಿನ್ನೆಲೆ ಹೇಳಿಕೊಳ್ಳುವಂತಿಲ್ಲ. ಬಡವರಾಗಿದ್ದು, ಜೀವನ ನಿರ್ವಹಣೆಗಾಗಿ ಕೃಷಿ, ಕೂಲಿ ಕಾರ್ಮಿಕರರಾಗಿದ್ದಾರೆ.
ಕಾಳಗಿಯ ಕಿಶೋರ್ ಕುಟುಂಬಕ್ಕೆ ಆದಾಯವಿಲ್ಲ. ಹೀಗಾಗಿ ತಂದೆ ಗೋವಿಂದ ಅವರು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಳ್ಳದ ದಂಡೆಯಲ್ಲಿರುವ 1 ಎಕರೆ ಹೊಲ ಇದ್ದೂ ಇಲ್ಲದಂತಿದೆ. ಕೆಲಸ ಅರಸಿ ಹೈದರಾಬಾದ್‌ಗೆ ತೆರಳಿರುವ ಅವರು, ರಸ್ತೆಗೆ ಹಾಕುವ ಜಲ್ಲಿಕಲ್ಲು ಒಡೆದು ಜೀವನ ಸಾಗಿಸುತ್ತಾರೆ. ಎರಡು–ಮೂರು ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಾರೆ.
‘ಅದೆಲ್ಲ ನಮಗೆ ಗೊತ್ತಾಗುವುದಿಲ್ಲ ಸರ್, ನಾವು ಕೂಲಿ ಮಾಡಿ ಜೀವನ ಮಾಡುತ್ತೇವೆ. ಒಟ್ಟಿನಲ್ಲಿ ಮಗ ಸಾಧನೆ ಮಾಡಿದರೆ ಸಾಕು. ನಾವು ಕಷ್ಟ ಪಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ತಂದೆ ಗೋವಿಂದ ಅವರು ಭಾವುಕರಾದರು.
ಮಾದನಹಿಪ್ಪರಗಾದ ಸಮರ್ಥ್ ಅವರದ್ದು ಕೃಷಿ ಕುಟುಂಬ. ಮೂರು ಎಕರೆ ಹೊಲ ಇದೆ. ಆದರೆ, ಮಳೆಯಾದರೆ ಮಾತ್ರ ಬೆಳೆ ಸಿಗುತ್ತದೆ. ಅತಿವೃಷ್ಟಿಯಿಂದಾಗಿ ಈ ವರ್ಷ ಅದೂ ಇಲ್ಲ. ‘ನಾವಿಬ್ಬರೂ(ಪತಿ–ಪತ್ನಿ) ಅಲ್ಲಿ ಇಲ್ಲಿ ಕೆಲಸ ಮಾಡಿ, ಜೀವನ ಮಾಡುತ್ತೇವೆ. ಮಳೆಯಾದೆ ಬೆಳೆ ಬರುತ್ತದೆ, ಇಲ್ಲದಿದ್ದರೆ ಇಲ್ಲ’ ಎಂದು ಲಕ್ಷ್ಮಣ ಬಜಾರೆ ಹೇಳಿದರು.
‘ಊರಲ್ಲಿ ಯಾರೋ ಹೇಳಿದ್ರು, ರನ್ನಿಂಗ್ ಕಾಂಪಿಟೇಷನ್ ಇದೇ ಅಂತ. ಮಗನ್ನ ಕರ್ಕೊಂಡು ಬಂದ್ವಿ, ಓಡಿದ ಸೆಲೆಕ್ಷನ್ ಆದ, ಹೀಗಾಗಿ ಇಲ್ಲಿಯೇ ಹಾಸ್ಟೆಲ್‌ಗೆ ಸೇರಿಸಿದ್ವಿ. ಈಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸಂತೋಷ ಆಗೇತ್ರಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.