ADVERTISEMENT

ಕಲಬುರಗಿ: ₹3.35 ಲಕ್ಷ ಮೊತ್ತದ ಆಭರಣ ಕಳವು

ಅಜ್ಜಿಯನ್ನು ಮಾತನಾಡಿಸಲು ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಕಳ್ಳರ ಕೈಚಳಕ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:46 IST
Last Updated 16 ಅಕ್ಟೋಬರ್ 2025, 7:46 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಕಲಬುರಗಿ: ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಗೆ ಹಾಕಿದ್ದ ಕೀಲಿ ಮುರಿದ ಕಳ್ಳರು ₹3.85 ಲಕ್ಷ ಮೊತ್ತದ ಚಿನ್ನ–ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ನಗರದ ವಿಜಯನಗರ ಕಾಲೊನಿಯ ನಿವಾಸಿ ಮಹಾಂತಯ್ಯ ಹಿರೇಮಠ ಆಭರಣ, ನಗದು ಕಳೆದು ಕೊಂಡವರು.

‘ಹುಷಾರಿಲ್ಲದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜಿಯನ್ನು ಮಾತನಾಡಿಸಲು ಅ.12ರಂದು ಮಧ್ಯಾಹ್ನ 12.15ರ ಸುಮಾರಿಗೆ ಮನೆಗೆ ಕೀಲಿ ಹಾಕಿ ಪತ್ನಿ ಸಮೇತ ಆಸ್ಪತ್ರೆಗೆ ಹೋಗಿದ್ದೆ. ಮರಳಿ ಸಂಜೆ 4.30ರ ಹೊತ್ತಿಗೆ ಬಂದು ನೋಡಿದಾಗ ಮನೆಗೆ ಹಾಕಿದ್ದ ಕೀಲಿ ಮುರಿದಿತ್ತು. 45 ಗ್ರಾಂ ಚಿನ್ನಾಭರಣ, 180 ಗ್ರಾಂ ಬೆಳ್ಳಿ ಆಭರಣ, ₹50 ಸಾವಿರ ನಗದು ಕದ್ದುಕೊಂಡು ಹೋಗಿದ್ದಾರೆ’ ಎಂದು ದೂರಿನಲ್ಲಿ ಮಹಾಂತಯ್ಯ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೀಲಿ ಮುರಿದು ಕೇಬಲ್‌, ಫ್ಯಾನ್‌ ಕಳವು

ಕಲಬುರಗಿ: ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಅಂಗಡಿಯೊಂದರ ಕೀಲಿ ಮುರಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್‌ ಹಾಗೂ ಒಂದು ಟೇಬಲ್‌ ಫ್ಯಾನ್‌ ಕದ್ದು ಪರಾರಿಯಾಗಿದ್ದಾರೆ.

‘ಅಂಗಡಿಯ ಶಟರ್‌ಗೆ ಹಾಕಿದ್ದ ಎರಡೂ ಕೀಲಿ ಮುರಿದು, ಟೇಬಲ್‌ ಫ್ಯಾನ್‌, ಕೇಬಲ್‌ ಬಂಡಲ್‌ಗಳು ಸೇರಿದಂತೆ ಒಟ್ಟು ₹1.45 ಲಕ್ಷ ಮೌಲ್ಯದ ವಸ್ತುಗಳನ್ನು ಕದಿಯಲಾಗಿದೆ’ ಎಂದು ಅಂಗಡಿಯ ಮಾಲೀಕ ಚಂದ್ರಶೇಖರ ಮೂಡಬೂಳ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಚೌಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ

ಕಲಬುರಗಿಯ ಸೇವಾಲಾಲ್‌ ನಗರದಲ್ಲಿ ಮಹಿಳೆಯೊಬ್ಬರು ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.

ಕಮಲಾಬಾಯಿ ಚುಂಚುರೆ ಮೃತರು. 

‘ನನ್ನ ಪತ್ನಿ ಹಾಗೂ ಮಗ ಜಗಳಾಡಿದ್ದರು. ಬಳಿಕ ಎಲ್ಲರೂ ಊಟ ಮಾಡಿ ಮಲಗಿದ್ದೆವು. ಮಗನೊಂದಿಗೆ ಜಗಳಾಡಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡು ಪತ್ನಿ ಕಮಲಾಬಾಯಿ ನೇಣು ಹಾಕಿಕೊಂಡಿದ್ದಾಳೆ’ ಎಂದು ಅವರ ಪತಿ ಚಂದ್ರಕಾಂತ ಚುಂಚುರೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

7 ಟನ್‌ ಪಡಿತರ ಅಕ್ಕಿ ಜಪ್ತಿ

ಕಲಬುರಗಿ: ನಗರದ ಆಳಂದ ರಸ್ತೆಯ ವಿಶ್ವರಾಧ್ಯ ಗುಡಿಯ ಬಳಿ ಎರಡು ವಾಹನಗಳ ಮೇಲೆ ದಾಳಿ ನಡೆಸಿದ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಒಟ್ಟು ₹2.43 ಲಕ್ಷ ಮೌಲ್ಯದ 7 ಟನ್‌ ಪಡಿತರ ಅಕ್ಕಿ ಹಾಗೂ ಅದನ್ನು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

‘ಎರಡು ವಾಹನಗಳಲ್ಲಿ ಪಡಿತರ ಅಕ್ಕಿಯನ್ನು ಕಲಬುರಗಿಯಿಂದ ಉಮರ್ಗಾದತ್ತ ಸಾಗಿಸಲಾಗುತ್ತಿತ್ತು. ಒಂದು ವಾಹನದಲ್ಲಿ 31 ಕ್ವಿಂಟಲ್‌ ಅಕ್ಕಿ ಇತ್ತು. ಇನ್ನೊಂದು ವಾಹನದಲ್ಲಿ 38.60 ಕ್ವಿಂಟಲ್‌ ಅಕ್ಕಿ ಇತ್ತು. ಒಟ್ಟು ₹2.43 ಲಕ್ಷ ಮೌಲ್ಯದ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ₹5 ಲಕ್ಷ ಹಾಗೂ ₹6 ಲಕ್ಷ ಮೌಲ್ಯದ ಎರಡು ವಾಹನಗಳನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಅಕ್ಕಿ ಸಾಗಿಸುತ್ತಿದ್ದ ವಾಹನದ ಇಬ್ಬರು ಚಾಲಕರು, ಇಬ್ಬರು ಮಾಲೀಕರು ಹಾಗೂ ಅಕ್ಕಿಯ ಇಬ್ಬರು ಮಾಲೀಕರ ವಿರುದ್ಧ ಸಬರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.