ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಸದಸ್ಯರು ಸೋಮವಾರ ಎಸ್‌ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ‘ನಮ್ಮ ತಂದೆ ತಾಯಿಗೆ ವಯಸ್ಸಾಗಿದೆ. ಅವರಿನ್ನೂ ಎಷ್ಟು ದುಡಿಯಬೇಕು? ನಾವು ದುಡಿಯಬೇಕು ಅಂದರೆ, ನಮಗೊಂದು ಕೆಲಸ ಬೇಕಲ್ಲವಾ? ನೀವು ಅಕ್ಕಿ ಕೊಟ್ವಿ, ಬಸ್ ಉಚಿತ ಮಾಡಿದ್ವಿ ಅಂತ ಹೇಳಿದ್ರೆ, ನಮ್ಮ ಬದುಕು ನಡೆಯೋದಿಲ್ಲ, ಮೊದಲು ಕೆಲಸ ಕೊಡಿ...’
ಇವು ಉದ್ಯೋಗಾಕಾಂಕ್ಷಿ ಸವಿತಾ ಜಿ.ಎಂ. ಅವರ ಆಕ್ರೋಶದ ನುಡಿಗಳು. ನಿತ್ಯ ನಗರದ ಕೇಂದ್ರ ಗ್ರಂಥಾಲಯದಲ್ಲಿ ಗಂಟೆಗಟ್ಟಲೇ ಕುಳಿತು ಅಭ್ಯಸಿಸುವ ಅವರು ಸೋಮವಾರ ಸಹಪಾಠಿಗಳೊಂದಿಗೆ ರಸ್ತೆಗಿಳಿದು ಸರ್ಕಾರದ ವಿರುದ್ಧ ಕಿಡಿಕಾರಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ ಪಾರದರ್ಶಕತೆ ತರಬೇಕು. ವಯೋಮಿತಿಯನ್ನು ಕನಿಷ್ಠ 5 ವರ್ಷ ಸಡಿಲಿಕೆ ಮಾಡಬೇಕು. ದಿನಗೂಲಿ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು. ಕಾಯಂ ನೇಮಕಾತಿ ಆಗಬೇಕು. ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು’ ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯುವಜನತೆ ರಸ್ತೆಗಿಳಿದಿತ್ತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಉದ್ಯೋಗಾಕಾಂಕ್ಷಿಗಳು, ‘40 ವರ್ಷ ಸಮೀಪಿಸಿದರೂ ಇನ್ನೂ ಉದ್ಯೋಗವೇ ಇಲ್ಲ. ನಾವಿನ್ನೂ ಎಷ್ಟು ದಿನ ಓದಬೇಕು. ಮನೆಯಿಂದ ಓದಿದಿಯಾ, ನೌಕರಿಯಾಯ್ತಾ? ಎಂದು ಫೋನ್ ಬರುತ್ತೆ. ಇದಕ್ಕೆ ನಾವೇನು ಉತ್ತರಿಸಬೇಕು? ಇನ್ನೂ ನೌಕರಿ ಆಗಿಲ್ಲವೆಂದರೆ ಅವರೆಷ್ಟು ನೊಂದುಕೊಳ್ಳುತ್ತಾರೆ. ಸರ್ಕಾರ ನೇಮಕಾತಿಗಳಿಗೆ ಅಧಿಸೂಚನೆ ಯಾಕೆ ಹೊರಡಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಒಳಮೀಸಲಾತಿ ಆಗಲಿ ಎಂದಿದ್ರಿ, ಅದೂ ಆಯ್ತು. ಆದರೂ ನೇಮಕಾತಿಗಳಿಗೆ ಸರ್ಕಾರದ ಅಧಿಸೂಚನೆಗಳು ಹೊರಬೀಳುತ್ತಿಲ್ಲ. ಸರ್ಕಾರದ ಸುಳ್ಳು ಭರವಸೆಗಳು ಸಾಕು. ಪ್ರತಿವರ್ಷ ನೇಮಕಾತಿಗಳು ನಡೆಯಬೇಕು. ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು. ಇದರಿಂದ ಪ್ರತಿ ಮನೆ ಉದ್ಧಾರ ಆಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ. ಯುವಜನತೆಗೆ ಸರ್ಕಾರದ ಮೇಲೆ ಭರವಸೆಯೂ ಮೂಡುತ್ತದೆ’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಮೇಶ ದೇವಕರ್, ತೇಜಸ್ ಆರ್. ಇಬ್ರಾಹಿಂಪೂರ, ಜಗನ್ನಾಥ ಎಸ್.ಎಚ್., ಈಶ್ವರ್ ಕೆ., ಪುಟ್ಟರಾಜು, ಪ್ರಿಯಾಂಕಾ ಕೆ.ಜಿ., ಮೇಘಾ ಬಿ., ಪವಿತ್ರಾ ಕೆ.ಜಿ., ಭಾಗ್ಯಶ್ರೀ ಎಂ.ಜೆ., ರಘು ಪವಾರ, ದೇವರಾಜ ಮಿರಲಕರ್ ಸೇರಿದಂತೆ ನೂರಾರು ಯುವಕ, ಯುವತಿಯರು ಭಾಗಿಯಾಗಿದ್ದರು.
ಹುದ್ದೆಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಬೇಕು. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಶಿಕ್ಷಕರ ನೇಮಕಾತಿಗೆ ಶೀಘ್ರ ಅಧಿಸೂಚನೆ ಹೊರಡಿಸಬೇಕುಪ್ರಿಯಾಂಕ ಕೆ. ಜಮಾದಾರ ಉದ್ಯೋಗಾಕಾಂಕ್ಷಿ
ನಾನು ಬಿಎಸ್‌ಸಿ ಬಿಇಡಿ ಪದವೀಧರೆಯಾಗಿದ್ದು ಕಳೆದ ಮೂರು ವರ್ಷಗಳಿಂದ ಶಿಕ್ಷಕಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಸರ್ಕಾರ ಶೀಘ್ರ ಅರ್ಜಿ ಕರೆಯಬೇಕುಮೇಘಾ ಬಿ. ಉದ್ಯೋಗಾಕಾಂಕ್ಷಿ
ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
‘ರಾಜ್ಯದಲ್ಲಿ ಲಕ್ಷ ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸಾವಿರ ಎರಡು ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತದೆ. ಕಲ್ಯಾಣ ಕರ್ನಾಟಕದಲ್ಲಿಯೇ 21381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯದಾದ್ಯಂತ 59454 ಹುದ್ದೆಗಳು ಖಾಲಿ ಇವೆ. ನಾವು ಇನ್ನೆಷ್ಟು ದಿನ ಓದುತ್ತಾ ಕುಳಿತುಕೊಳ್ಳಬೇಕು’ ಎಂದು ಜಗನ್ನಾಥ ಎಸ್.ಎಚ್. ಬೇಸರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.