
ಕಲಬುರಗಿ: ನಗರದ ಕುಸನೂರು ರಸ್ತೆಯಲ್ಲಿ ಹೊಸ ಆರ್‌ಟಿಒ ಕಚೇರಿಯಿಂದ ಐಯ್ಯಂಗಾರ್ ಬೇಕರಿ ತನಕ ಹೆಚ್ಚೆಂದರೆ 100 ಮೀಟರ್ ಉದ್ದವಿದೆ. ಅಷ್ಟರಲ್ಲೇ ಹತ್ತಾರು ಗುಂಡಿಗಳು, ಹಲವು ಹೊಂಡಗಳು ಬಿದ್ದಿದ್ದು, ವಾಹನಗಳ ಸವಾರರು ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಣ್ಣ ವಾಹನಗಳು ಸಾಗಿದರೂ ದೂಳಿನ ಅಲೆಯೇ ಏಳುತ್ತದೆ. ಈ ಮಾರ್ಗದಲ್ಲಿ ಸಾಗುವವರಿಗೆ ದೂಳಿನ ಮಜ್ಜನ ಖಚಿತ! ದೂಳು ಕಣ್ಣಲ್ಲಿ ಹೊಕ್ಕು ನಿತ್ಯ ಒಬ್ಬಿಬ್ಬರಾದರೂ ಬಿದ್ದು ಗಾಯಗೊಳ್ಳುತ್ತಾರೆ. ವಿಪರೀತ ದೂಳಿನಿಂದಾಗಿ ರಸ್ತೆ ಬದಿಯ ಅಂಗಡಿಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.
‘ನಿತ್ಯ ಸರ್ಕಾರಿ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುವ ಮಾರ್ಗವಿದು. 100 ಮೀಟರ್‌ನಲ್ಲಿ ಎಷ್ಟು ತೆಗ್ಗು, ಹೊಂಡಗಳಿವೆ, ಗೊತ್ತಾ? ವಾಹನ ನಡೆಸುವುದೇ ದುಸ್ತರ. ಕುಸನೂರು ಕಡೆಯಿಂದ ಎಷ್ಟೇ ವೇಗವಾಗಿ ಬಂದರೂ ಐಯ್ಯಂಗಾರ್ ಬೇಕರಿ ಬರುವಷ್ಟರಲ್ಲಿ ವೇಗ ತಗ್ಗಿಸಿ 2ನೇ ಗಿಯರ್‌ಗೆ ಹಾಕಬೇಕು. ತೆವಳುತ್ತಲೇ ಸಾಗಬೇಕು. ಇಲ್ಲದಿದ್ದರೆ ವಾಹನಗಳ ಸಸ್ಪೆನ್ಸರ್, ಬೇರಿಂಗ್ ದುರಸ್ತಿಗೆ ಗ್ಯಾರೇಜಿಗೆ ಅಲೆಯಬೇಕಾಗುತ್ತದೆ. ಜೊತೆಗೆ ವಿಪರೀತ ದೂಳಿನ ಕಾಟ. ಹೊಸ ರಸ್ತೆ ಮಾಡದಿದ್ದರೂ ಪರವಾಗಿಲ್ಲ, ಪಾಲಿಕೆಯವರು ಕನಿಷ್ಠ ಗುಂಡಿಗಳನ್ನಾದರೂ ಮುಚ್ಚಲಿ’ ಎಂಬುದು ಆಟೊ ಚಾಲಕ ಸಾಜೀದ್‌ಅಲಿ ಆಕ್ರೋಶ.
‘ಈ ರಸ್ತೆಯಲ್ಲಿ ಬಿದ್ದ ಗುಂಡಿಗಳು ವಾಹನಗಳ ಓಡಾಟದಿಂದ ಹೊಂಡಗಳಾಗಿವೆ. ನಿತ್ಯ ದೂಳಿನ ಜಳಕ ತಪ್ಪುತ್ತಿಲ್ಲ. ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಮೊದಲು ಭಜಿ, ಸೂಸಲಾ, ಆಲೂಭಾತ್, ಪೂರಿ ಮಾಡುತ್ತಿದ್ದೆವು. ದೂಳಿನ ಕಾಟಕ್ಕೆ ಬೇಸತ್ತು ಬರೀ ಸಮೋಸಾ ಚಹಾ ಮಾರಾಟಕ್ಕೆ ಸೀಮಿತವಾಗಿದ್ದೇವೆ. ಅಧಿಕಾರಿಗಳು ಬೇಗ ಗುಂಡಿ ಮುಚ್ಚಿದರೆ ವ್ಯಾಪಾರ ಸುಧಾರಿಸಿದರೆ ಮಕ್ಕಳ ಶಾಲಾ ಖರ್ಚಿಗೆ ಅನುಕೂಲವಾಗುತ್ತದೆ’ ಎಂಬುದು ಹೊಸ ಆರ್‌ಟಿಒ ಕಚೇರಿ ಎದುರಿನ ಕಿರು ಹೋಟೆಲ್ ನಡೆಸುವ ಈರಮ್ಮ ಹಿರೇಮಠ ಅಳಲು.
ವಾಹನಗಳು ಸಂಚರಿಸದಷ್ಟು ಗುಂಡಿಗಳು ಬಿದ್ದರೂ ಪಾಲಿಕೆ ಅವುಗಳನ್ನು ತುಂಬದೇ ಬರೀ ಅದೇ ಗುಂಡಿಗಳ ಅಂಚು ಕೆದರಿ ಸಮತಟ್ಟು ಮಾಡಿದ್ದಾರೆಬಾಬುರಾವ್ ಸುಂಟಾನ್ ಮಾಜಿ ಉಪ ಮೇಯರ್
ಅಂಬಾಭವಾನಿ ದೇವಸ್ಥಾನದಿಂದ ಶಹಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ದುರಸ್ತಿಗೆ ₹3 ಕೋಟಿ ವೆಚ್ಚದ ಟೆಂಡರ್ ಆಗಿದೆ. ಶೀಘ್ರವೇ ಕೆಲಸ ಶುರುವಾಗಲಿದೆವೀರಣ್ಣ ಹುನ್ನಳ್ಳಿ ಕಲಬುರಗಿ ಮಹಾನಗರ ಪಾಲಿಕೆ ವಾರ್ಡ್ 48ರ ಸದಸ್ಯ
ಹೊಲದ ದಾರಿಯಲ್ಲ; 80 ಅಡಿ ರಸ್ತೆ!
ಇನ್ನು ಕುಸನೂರು ರಸ್ತೆಯ ಅಂಬಾಭವಾನಿ ದೇವಸ್ಥಾನದ ಎದುರಿನಿಂದ ಶಹಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆಯ ಬರೀ ಗುಂಡಿಗಳಿಂದ ತುಂಬಿದ್ದು ಗ್ರಾಮೀಣ ಪ್ರದೇಶದ ಹೊಲ ದಾರಿಯಂತೆ ಭಾಸವಾಗುತ್ತದೆ. ತಗ್ಗು–ಗುಂಡಿಗಳಲ್ಲಿ 100 ಮೀಟರ್ ಸಾಗಿದರೆ ಒಳಚರಂಡಿ ಚೇಂಬರ್ ಬಳಿ ದೊಡ್ಡ ಹೊಂಡ ಬಿದ್ದಿದ್ದು ಎಲ್ಲ ವಾಹನಗಳು ಕುಂಟುತ್ತಲೇ ಸಾಗುತ್ತವೆ. ಸಣ್ಣ ವೇಗದಲ್ಲಿ ಸಾಗಿದರೂ ವಾಹನಗಳು ಅಪಘಾತಕ್ಕೀಡಾಗುವುದು ಖಚಿತ.
‘ಇದು ರಸ್ತೆಯೋ ಹೊಂಡವೋ ತಿಳಿಯಂತಾಗಿದೆ. ನಿತ್ಯ ಒಬ್ಬರಿಲ್ಲ ಒಬ್ಬರು ಬೀಳುತ್ತಲೇ ಇರುತ್ತಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಓಡಾಡಿದರೂ ಅವರಿಗೆ ಕಣ್ಣಿಗೆ ಕಾಣಲ್ಲ. ಅದೇ ರಸ್ತೆಯಲ್ಲಿ ಟಿಪ್ಪರ್‌ಗಳು ಓಡಾಡುತ್ತವೆ. ಅವು ಅತ್ತಿಂದಿತ್ತ ಇತ್ತಿಂದತ್ತ ವಾಲುತ್ತ ಹೋಗುವುದು ನೋಡಿದರೆ ಪಕ್ಕದಲ್ಲಿ ಬೈಕ್‌ನಲ್ಲಿ ಸಾಗಲು ಬೆದರಿಕೆ ಆಗುತ್ತದೆ. ಇಷ್ಟಾದರೂ ಈ ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಸರಸ್ವತಿಪುರ ನಿವಾಸಿ ಕಲ್ಯಾಣರಾವ ಕುಸನೂರ 48ನೇ ವಾರ್ಡ್ ನಿವಾಸಿ ಶ್ರೀಕಾಂತ ಸಾವಳಕರ ಹೇಳುತ್ತಾರೆ. ‘ಈ ರಸ್ತೆಯಲ್ಲಿ ಹುಡುಕಿದರೂ ಡಾಂಬರ್ ಸಿಗಲ್ಲ. ಮಳೆಗಾಲದಲ್ಲಿ ಕೆಸರಿನ ಹೊಂಡವಾಗುತ್ತದೆ. ಬಿಸಿಲು ಬಿದ್ದರೆ ದೂಳಿನ ಪ್ರವಾಹವೇ ಏಳುತ್ತದೆ. ಬೆಳಿಗ್ಗೆ ಕುರುಕುರಿ–ಚಿಪ್ಸ್ ಪ್ಯಾಕೆಟ್ ಜೋಡಿಸಿಟ್ಟರೆ ಮಧ್ಯಾಹ್ನದ ಹೊತ್ತಿಗೆ ಬರುವ ಗ್ರಾಹಕರು ಇದು ಬಹಳ ಹಳೆಯದಿದೆ ಹೊಸದು ಕೊಡಿ ಎನ್ನುತ್ತಾರೆ. ನಮ್ಮ ಕಷ್ಟ ಯಾರಿಗೆ ಹೇಳ್ಬೇಕು?’ ಎಂಬುದು ಕೇತಕಿ ಸಂಗಮೇಶ್ವರ ಕಿರಾಣಾ ಸ್ಟೋರ್‌ನ ರವಿ ಶೆಟ್ಟಿ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.