
ಕಲಬುರಗಿ: ‘12ನೇ ಶತಮಾನದಲ್ಲಿ ಬಸವಣ್ಣನವರು ತಳ ಸಮುದಾಯಗಳಿಗೆ ಇಷ್ಟಲಿಂಗ ಎನ್ನುವ ಸಮಾನತೆಯ ಬೆಳಕು ನೀಡಿದರು. ಮನುಷ್ಯತ್ವದ ಕಡೆ ಕೊಂಡೊಯ್ದರು. ಆದ್ದರಿಂದ ಮೂಲದಲ್ಲಿ ಎಲ್ಲರೂ ಲಿಂಗಾಯತರೇ’ ಎಂದು ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಲಿಂಗ, ವಿಭೂತಿ, ರುದ್ರಾಕ್ಷಿಗೆ ಜಾತಿ ಇಲ್ಲ. ಬಸವಣ್ಣ ಎಂದರೆ ಆಲದ ಮರ. ಅದರಡಿ ನಾವೆಲ್ಲರೂ ಇರಬೇಕು’ ಎಂದರು.
‘ಮಡಿವಾಳ ಮಾಚಿದೇವರು ಬಿಜ್ಜಳನ ತಲೆ ಕೆಡಿಸಿದ ಕುಹಕಿಗಳ ಜೊತೆ ಹೋರಾಡಿದರು. ನಾವು ಶರಣರಾಗಿದ್ದೇವೆ. ನಿಮ್ಮ ನೆರಳು ನಮ್ಮ ಬಟ್ಟೆ ಮೇಲೆಯೂ ಬೀಳುವುದು ಬೇಡ ಎನ್ನುತ್ತಿದ್ದರು. ಮಡಿವಾಳ ಸಮುದಾಯದವರು ಮನೆಯಲ್ಲಿ ಪ್ರತಿ ದಿನ ಶರಣರ ಐದು ವಚನ ಓದುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಾಸಕ ಅಲ್ಲಮಪ್ರಭು ಮಾತನಾಡಿ, ‘ಮಡಿವಾಳ ಮಾಚಿದೇವರು ಜಾತಿ ಪದ್ಧತಿ, ಮೂಢನಂಬಿಕೆಯ ವಿರುದ್ಧ ನೇರವಾಗಿಯೇ ಬರೆದರು. ಸತ್ಯವನ್ನೇ ಹೇಳಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ಖಡ್ಗ ಹಿಡಿದರು. ಎಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
‘ಮಡಿವಾಳ ಸಮಾಜ ಸಣ್ಣ ಸಮಾಜವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉತ್ತಮವಾಗಿ ಬದುಕಿದಾಗ ಮಾಚಿದೇವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಸದಾ ಮಡಿವಾಳ ಸಮಾಜದ ಬೆನ್ನಿಗೆ ಇರುತ್ತೇನೆ’ ಎಂದು ಹೇಳಿದರು.
ಪ್ರಾಧ್ಯಾಪಕ ಸಂಜಯ್ ಮಾಕಲ್ ಮಾತನಾಡಿ, ‘ಮಡಿವಾಳ ಮಾಚಿದೇವರು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಮಡಿವಾಳರು ಎಲ್ಲರಿಗಿಂತ ಶ್ರೇಷ್ಠರು’ ಎಂದು ಅಭಿಪ್ರಾಯಪಟ್ಟರು.
‘ಹಿಂದೂ ಧರ್ಮಶಾಸ್ತ್ರದಲ್ಲಿ ತಳ ಸಮುದಾಯದವರು ಹೊಸ ಬಟ್ಟೆ ಧರಿಸುವಂತಿಲ್ಲ ಹಾಗೂ ಖಡ್ಗ ಹಿಡಿಯುವಂತಿಲ್ಲ ಎಂದು ಬರೆಯಲಾಗಿತ್ತು. ಅದಕ್ಕೆ ಉತ್ತರವಾಗಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಮಡಿವಾಳ ಮಾಚಿದೇವರು ಖಡ್ಗ ಹಿಡಿದರು. ಆ ಖಡ್ಗ ದೇವರಹಿಪ್ಪರಗಿಯಲ್ಲಿ ಇನ್ನೂ ಇದೆ’ ಎಂದರು.
ಇದಕ್ಕೂ ಮುನ್ನ ಜಗತ್ ವೃತ್ತದಿಂದ ಎಸ್.ಎಂ.ಪಂಡಿತ ರಂಗ ಮಂದಿರದವರೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ನಾಸಿ, ಶಿವುಪ್ರಭು ಹಿರೇಮಠ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರವಿಕುಮಾರ ಶಹಾಪುರಕರ, ಗೌರವಾಧ್ಯಕ್ಷ ಶಿವಪುತ್ರ ಹಾಜರಿದ್ದರು.
ನಾವೆಲ್ಲರೂ ಜಗತ್ತಿಗೆ ಮೊದಲ ಸಂಸತ್ತು ಕೊಟ್ಟವರ ಮೊಮ್ಮಕ್ಕಳು. ವಿಶ್ವಕ್ಕೆ ನಮ್ಮದೇ ಆದ ಧರ್ಮ ಕೊಟ್ಟಿದ್ದೇವೆ. ಮಡಿವಾಳ ಸಮಾಜದವರು ಮಾಚಿದೇವರ ದಾರಿಯಲ್ಲಿ ಸಾಗಿಸಂಜಯ್ ಮಾಕಲ್ ಪ್ರಾಧ್ಯಾಪಕ
‘ಸತ್ಯ ಶುದ್ಧ ಕಾಯಕ ಮಾಡುವ ಶರಣರ ಬಟ್ಟೆಗಳನ್ನು ಮಾತ್ರ ಮಡಿವಾಳ ಮಾಚಿದೇವರು ಮಡಿ ಮಾಡುತ್ತಿರುತ್ತಾರೆ’ ಎಂದು ಪ್ರಾಧ್ಯಾಪಕ ಸಂಜಯ್ ಮಾಕಲ್ ಹೇಳಿದರು. ‘ಅರಮನೆ ಬಟ್ಟೆಗಳನ್ನು ಮಡಿ ಮಾಡಲು ನಿರಾಕರಿಸಿದ ಅವರನ್ನು ರಾಜಭಟರು ಆನೆ ಕಾಲಿಗೆ ಕಟ್ಟಿ ಎಳೆದುಕೊಂಡು ಹೋಗಲು ಮುಂದಾದಾಗ ಮಾಚಿದೇವರು ಖಡ್ಗದಿಂದ ಹಿಮ್ಮೆಟ್ಟಿಸುತ್ತಾರೆ. ಅವರ ದಿಟ್ಟತನವನ್ನು ಬಿಜ್ಜಳ ನೆಚ್ಚಿಕೊಳ್ಳುತ್ತಾನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.