ADVERTISEMENT

ಕಲಬುರಗಿ | ನಿಲ್ಲದ ಮಳೆ; ಬಿಸಿಲುನಾಡಿಗೆ ಮಲೆನಾಡ ಕಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 7:26 IST
Last Updated 16 ಸೆಪ್ಟೆಂಬರ್ 2025, 7:26 IST
   

ಕಲಬುರಗಿ: ‘ಆಕಾಶವೆ ನೀರಾಯ್ತೆನೆ

ಸುರಿಯುತ್ತಿದೆ ಭೋರ್ಭೋರೆನೆ

ಮುಂಗಾರ್ ಮಳೆ ಧಾರೆ;

ADVERTISEMENT

ಲಯ ಭೀಷಣ ಮಳೆ ಭೈರವ

ಮೈದೋರಲು ಮರೆಯಾಗಿವೆ ಶಶಿ ತಾರೆ!

ಇದು ರಾಷ್ಟ್ರಕವಿ ಕುವೆಂಪು ಅವರು ವರ್ಷಭೈರವ ಕವನದಲ್ಲಿ ಮಳೆಯನ್ನು ವರ್ಣಿಸಿದ ಪರಿ. ಅದೇ ಪರಿಯಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ವ್ಯಾಪಿಸಿದೆ. ಬಿಸಿಲಿಗೆ ಹೆಸರಾದ ಕಲಬುರಗಿಗೆ ಮಲೆನಾಡಿನ ಕಳೆ ತಂದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಆಗಸದಲ್ಲಿ ದಟ್ಟೈಸಿರುವ ಕಾರ್ಮೋಡಗಳು ಮಳೆ ಸಿಂಚನಗೈಯುತ್ತಿವೆ. ನಿರಂತರ ಮಳೆಗೆ ಇಳೆಗೆ ತಂಪಾಗಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಸೂರ್ಯ ರಜೆ ಹಾಕಿದಂತೆ ಭಾಸವಾಗುತ್ತಿದೆ. ನಿರಂತರ ಮಳೆಗೆ ಜನಜೀವನವೂ ಅಸ್ತವ್ಯಸ್ತಗೊಂಡಿದೆ.

ಮಂಗಳವಾರವೂ ನಸುಕಿನಿಂದಲೇ ಬೆಳಿಗ್ಗೆ ತನಕ ಬಿರುಸಿನ ಮಳೆಯಾಗಿದೆ. ಬೆಳಿಗ್ಗೆ 8.30ರ ತನಕ ಜಿಟಿಜಿಟಿ ಮಳೆ ಮುಂದುವರಿದಿತ್ತು. ಆಗೀಗ ಸೂರ್ಯ ಇಣುಕಿದಂತೆ ಬಿಸಿಲು ಕಂಡರೂ ಮಧ್ಯಾಹ್ನ 12 ಗಂಟೆಯಾದರೂ ಸೂರ್ಯನ ಬಿಸಿಲು ಕಂಡಿಲ್ಲ. ಆಗಾಗ ತುಂತುರು ಮಳೆಯೂ ಸುರಿಯುತ್ತಿದೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್‌ನಲ್ಲಿ 83 ಮಿಮೀ, ಕಲಬುಗರಿ ತಾಲ್ಲೂಕಿನ ಮೇಳಕುಂದಾ(ಬಿ) ಗ್ರಾಮದಲ್ಲಿ 73 ಮಿ.ಮೀ ಕಣದಾಳದಲ್ಲಿ 65 ಮಿ.ಮೀ, ಜೇವರ್ಗಿ ತಾಲ್ಲೂಕಿನ ಮಂದೇವಾಲದಲ್ಲಿ 56 ಮಿ.ಮೀ., ಆಳಂದ ತಾಲ್ಲೂಕಿನ ಲಾಡಮುಗಳಿಯಲ್ಲಿ 43.5 ಮಿ.ಮೀ, ಕಡಗಂಚಿಯಲ್ಲಿ 34.5 ಮಿ.ಮೀ, ಕಲಬುರಗಿ ತಾಲ್ಲೂಕಿನ ಕಿರಣಗಿಯಲ್ಲಿ 31 ಮಿ.ಮೀ ಮಳೆಯಾದ ಬಗೆಗೆ ಹಮಾವಾನ ಇಲಾಖೆ ವರದಿ ತಿಳಿಸಿದೆ.

ನಿರಂತರ ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ತೊಗರಿ, ಹತ್ತಿಯಂಥ ಕೃಷಿ ಬೆಳೆಗಳು, ಪಪ್ಪಾಯ, ಕಲ್ಲಂಗಡಿಯಂಥ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.

ಬಿಸಿಲುನಾಡು ಅಕ್ಷರಶಃ ಮಲೆನಾಡಿನಂತೆ ಭಾಸವಾಗುತ್ತಿದೆ. ಮಧ್ಯಾಹ್ನ 12 ಗಂಟೆಯಾದರೂ ಸೂರ್ಯನ ಸುಳಿವಿಲ್ಲ. ಆಗಾಗ ತುಂತುರು ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ತೊಗರಿ, ಹತ್ತಿಯಂಥ ಕೃಷಿ ಬೆಳೆಗಳು, ಪಪ್ಪಾಯ, ಕಲ್ಲಂಗಡಿಯಂಥ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.