ADVERTISEMENT

ಆಸ್ತಿ ತೆರಿಗೆಯಲ್ಲಿ ಚುರುಕಿನ ಪ್ರಗತಿ: 5 ವರ್ಷಗಳಲ್ಲೇ ಗರಿಷ್ಠ ವರಮಾನ ದಾಖಲೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:16 IST
Last Updated 4 ಫೆಬ್ರುವರಿ 2026, 5:16 IST
ಕಲಬುರ್ಗಿ ಮಹಾನಗರ ಪಾಲಿಕೆಯ ನೋಟ
ಕಲಬುರ್ಗಿ ಮಹಾನಗರ ಪಾಲಿಕೆಯ ನೋಟ   

ಕಲಬುರಗಿ: ತೆರಿಗೆ ಸಂಗ್ರಹದಲ್ಲಿ ಸದಾ ಹಿಂದೆ ಬಿದ್ದಿರುತ್ತಿದ್ದ ಕಲಬುರಗಿ ಮಹಾನಗರ ಪಾಲಿಕೆ ವರಮಾನ ಸಂಗ್ರಹಣೆಯಲ್ಲಿ ಈ ಸಲ ಚುರುಕಿನ ಪ್ರಗತಿ ದಾಖಲಿಸಿದೆ. 

2025-26ನೇ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯಕ್ಕೆ ₹46.10 ಕೋಟಿಗಳಷ್ಟು ತೆರಿಗೆ ಸಂಗ್ರಹಿಸಿ ಶೇ 65.32ರಷ್ಟು ಗುರಿ ಸಾಧಿಸಿದೆ. ಕಳೆದ ಐದು ವರ್ಷಗಳಲ್ಲೇ ಇದು ದಾಖಲೆಯ ತೆರಿಗೆ ಸಂಗ್ರಹ ಎಂಬುದು ವಿಶೇಷ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 55 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪಾಲಿಕೆಯು ₹33.77 ಕೋಟಿ ಹಿಂಬಾಕಿ ಹಾಗೂ ₹36.79 ಕೋಟಿ ಚಾಲ್ತಿ ತೆರಿಗೆ ಸೇರಿದಂತೆ ಒಟ್ಟು ₹70.57 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಿತ್ತು.

ADVERTISEMENT

ಸಾರ್ವಜನಿಕರು ಪಾವತಿಸುವ ತೆರಿಗೆ ಹಣವೇ ಮಹಾನಗರ ಪಾಲಿಕೆಗೆ ಆದಾಯದ ಪ್ರಮುಖ ಮೂಲ.‌ ಈ ತೆರಿಗೆ ವಸೂಲಾತಿಗೆ ಪಾಲಿಕೆ ಅಧಿಕಾರಿಗಳು ವಿಶೇಷ ಅಭಿಯಾನ ಕೈಗೊಂಡ ಫಲವಾಗಿ ದಾಖಲೆಯ ₹46 ಕೋಟಿಗೂ ಅಧಿಕ ವರಮಾನ ಹರಿದು ಬಂದಿದೆ. ‘ಎ’ ಖಾತಾ ಹಾಗೂ ‘ಬಿ’ ಖಾತಾ ಅಭಿಯಾನವೂ ಈ ತೆರಿಗೆ ಮೊತ್ತಕ್ಕೆ ತಕ್ಕಮಟ್ಟದ ಕೊಡುಗೆ ನೀಡಿದೆ. ಕಳೆದೊಂದು ವರ್ಷದಲ್ಲಿ ಮಹಾನಗರ ಪಾಲಿಕೆಯಲ್ಲಿ 10,727 ‘ಬಿ’ ಖಾತಾಗಳನ್ನು ವಿತರಿಸಲಾಗಿದ್ದು, ಅದರಿಂದಲೂ ತೆರಿಗೆ ಹಾಗೂ ದಂಡ ಶುಲ್ಕದ ರೂಪದಲ್ಲಿ ಒಂದಿಷ್ಟು ಆದಾಯ ಬೊಕ್ಕಸ ಸೇರಿದೆ.

₹27.77 ಕೋಟಿ ಬಾಕಿ: ಉತ್ತಮ ಆದಾಯ ಸಂಗ್ರಹದ ನಡುವೆಯೂ ಪಾಲಿಕೆಯು ಇನ್ನೂ ₹27.77 ಕೋಟಿಗಳಷ್ಟು ತೆರಿಗೆ ವಸೂಲಾತಿಗೆ ಬಾಕಿ ಉಳಿಸಿಕೊಂಡಿದೆ.

‘ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಎರಡು ತಿಂಗಳಷ್ಟೇ ಉಳಿದಿದೆ. ಸರಣಿ ತೆರಿಗೆ ಸಂಗ್ರಹ ಅಭಿಯಾನ ನಡೆಸಲು ಚಿಂತಿಸಲಾಗಿದ್ದು, ಈ ಸಲ ದಾಖಲೆಯ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

₹3 ಕೋಟಿ ವರಮಾನ ನಿರೀಕ್ಷೆ: ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊಬೈಲ್‌ ಟವರ್‌ಗಳು, ರೂಟರ್‌ಗಳು ಸೇರಿದಂತೆ 360 ಸಂವಹನ ಸಾಧನೆಗಳು ಅಳವಡಿಕೆಯಾಗಿವೆ. ಇವುಗಳಿಗೆ 2014ರಿಂದಲೇ ತೆರಿಗೆ ವಿಧಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಕೆಲಸ ಆಗಿಲ್ಲ. ಇವುಗಳ ಸೇವಾ ಕಂಪನಿಗಳಿಗೆ ಈ ಸಂಬಂಧ ಈಗಾಗಲೇ ಎರಡು ಸಲ ನೋಟಿಸ್‌ ಕೊಡಲಾಗಿದೆ. ಇವುಗಳಿಂದ ಅಂದಾಜು ₹3 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಅದೂ ಸೇರಿದರೆ ಪಾಲಿಕೆಯ ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲಿದೆ’ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

ನಗರದ ಒಳಗೆ ತೆರಿಗೆಯಿಂದ ಹೊರಗೆ!

‘ಕಲಬುರಗಿ ಮಹಾನಗರ ಪಾಲಿಕೆಯು 55 ವಾರ್ಡ್‌ಗಳನ್ನು ಹೊಂದಿದೆ. ಪಾಲಿಕೆ ವ್ಯಾಪ್ತಿಯು ರಿಂಗ್‌ ರಸ್ತೆ ದಾಟಿ ದೂರದ ತನಕ ಹರಿಡಿದೆ. ಆದರೆ ತೆರಿಗೆಯ ತೆಕ್ಕೆಗೆ ಮಾತ್ರವೇ ಈ ಆಸ್ತಿಗಳು ದಕ್ಕುತ್ತಿಲ್ಲ’ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘ನಗರದಲ್ಲಿರುವ ಬಹುತೇಕ ಬಡಾವಣೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಎನ್‌ಎ ಆಗಿಲ್ಲದೇ ಲೇಔಟ್‌ಗೆ ಅನುಮೋದನೆ ಪಡೆಯದೇ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಇಂಥ ಆಸ್ತಿಗಳಿಗೆ ‘ಬಿ’ ಖಾತಾ ಪಡೆಯಲು ಈಗಲೂ ಹಲವರು ಹಿಂದೇಟು ಹಾಕುತ್ತಿದ್ದಾರೆ. ಅವರೆಲ್ಲ ತೆರಿಗೆ ವ್ಯಾಪ್ತಿಗೆ ಬಂದರೆ ಪಾಲಿಕೆಯ ಆದಾಯ ವೃದ್ಧಿಸುತ್ತದೆ’ ಎನ್ನುತ್ತಾರೆ ಅವರು.

ತೆರಿಗೆ ಸಂಗ್ರಹದಲ್ಲಿ ಆಶಾದಾಯಕ ‍ಪ್ರಗತಿ ಸಾಧಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಇನ್ನಷ್ಟು ವಿಶೇಷ ಅಭಿಯಾನದ ಮೂಲಕ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗುವುದು
– ಅವಿನಾಶ ಶಿಂದೆ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.