ಕಲಬುರಗಿ: ‘ದುರ್ಬಲ ದೇಶಗಳ ಶೋಷಣೆಯನ್ನು ತಡೆಗಟ್ಟಲು, ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು, ಪ್ರತಿಯೊಂದು ದೇಶದ ಜವಾಬ್ದಾರಿಗಳನ್ನು ಗುರುತಿಸಲು ಮತ್ತು ಗಡಿಯಾಚೆಗಿನ ವಿವಾದಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಕಾನೂನುಗಳು ಬಹಳ ಮುಖ್ಯ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯ ಕಾನೂನು ವಿಭಾಗ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮಾರಿಷಸ್‌ನ ವ್ಯವಹಾರ ನಿರ್ವಹಣೆ ಮತ್ತು ಕಾನೂನು ವಿಭಾಗವು ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಕಾನೂನಿನ ಬಹುಶಿಸ್ತೀಯ ಅಂಶಗಳು’ ಕುರಿತು ಒಂದು ವಾರದ ಆನ್‌ಲೈನ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂತಹ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಗಳು ಜಾಗತಿಕ ಸವಾಲುಗಳನ್ನು ನಿರ್ವಹಿಸಲು ಮತ್ತು ಭಾರತ ಮತ್ತು ಮಾರಿಷಸ್ ನಡುವಿನ ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಸಹಾಯ ಮಾಡುತ್ತದೆ’ ಎಂದು ಮಾರಿಷಸ್‍ನ ತಂತ್ರಜ್ಞಾನ ವಿಶ್ವವಿದ್ಯಾಲಯದ ಭಾವನಾ ಮಹಾದೇವ್ ಹೇಳಿದರು.
ತಂತ್ರಜ್ಞಾನ ವಿಶ್ವವಿದ್ಯಾಲಯದ ವ್ಯವಹಾರ, ನಿರ್ವಹಣೆ ಮತ್ತು ಹಣಕಾಸು ನಿಕಾಯದ ಡೀನ್ ಬಿಸಮ್ ನವತ್ ಸಿಂಗ್, ‘ಕಾನೂನು ಸಾಕ್ಷರತೆ, ಮಾರಿಷಸ್‍ನಂತಹ ದ್ವೀಪ ಆರ್ಥಿಕತೆಗಳಲ್ಲಿ ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಸಹಯೋಗದ ಸಂಶೋಧನಾ ಯೋಜನೆಗಳ ಸಾಮರ್ಥ್ಯಕ್ಕೆ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಗಳು ಬಹಳ ಪ್ರಸ್ತುತವಾಗಿದೆ’ ಎಂದು ಹೇಳಿದರು.
ಮಾರಿಷಸ್‍ನ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಹಾನಿರ್ದೇಶಕ ದಿನೇಶ್ ಕೆ. ಹುರ್ರೀರಾಮ್ ಮಾತನಾಡಿ, ‘ಈ ಕಾರ್ಯಾಗಾರವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಆರ್ಥಿಕ ಕಾನೂನು ಮತ್ತು ಪರಿಸರ ಕಾನೂನಿನಂತಹ ಅಂತರರಾಷ್ಟ್ರೀಯ ಕಾನೂನಿನ ಪ್ರಮುಖ ಕ್ಷೇತ್ರಗಳ ಕುರಿತು ಶಿಕ್ಷಕರಿಗೆ ವಿಸ್ತೃತ ಜ್ಞಾನ ನೀಡಲಿದೆ. ಸುಮಾರು 475 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶ್ಲಾಘನೀಯ’ ಎಂದರು.
ಸಿಯುಕೆಯ ಕಾನೂನು ಅಧ್ಯಯನ ನಿಕಾಯದ ಡೀನ್ ಬಸವರಾಜ್ ಕುಬಕಡ್ಡಿ ಸ್ವಾಗತಿಸಿದರು. ಜಯಂತ ಬೊರುವಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.