ADVERTISEMENT

ಕಲಬುರಗಿ|ಶಾಲೆ ಸ್ಥಳಾಂತರಕ್ಕೆ ಮಲ್ಕಾಪಲ್ಲಿ ಗ್ರಾಮಸ್ಥರ ಆಗ್ರಹ:ಧರಣಿ ಕುಳಿತ ಪಾಲಕರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 5:48 IST
Last Updated 23 ಆಗಸ್ಟ್ 2025, 5:48 IST
   

ಸೇಡಂ(ಕಲಬುರಗಿ): ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದು ವಿದ್ಯಾರ್ಥಿಗಳ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪಾಲಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಹಾಗೂ ಆ ಶಾಲಾ ಕಟ್ಟಡಕ್ಕೆ ಹೋಗಲು ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶಾಲಾ ಆವರಣದಲ್ಲಿ ಜಮಖಾನೆ ಹಾಸಿ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಶುಕ್ರವಾರ ಶಾಲೆಯ ಛತ್ತಿನ ಸಿಮೆಂಟ್ ಪದರು ಉದುರಿ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಅದೃಷ್ಟವಶಾತ್ ಬಹುತೇಕ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲೆಯ ಕಟ್ಟಡವೇ ಬಿದ್ದರೆ ಪರಿಸ್ಥಿತಿ ಗಂಭೀರವಾಗುತ್ತಿತ್ತು. ಇದಕ್ಕೆಲ್ಲಾ ಯಾರೂ ಜವಾಬ್ದಾರಾಗುತ್ತಾರೆ ಎಂದು ಪಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ADVERTISEMENT

ಕೂಡಲೇ ನೂತನ ಶಾಲಾ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಬೇಕು. ಶಾಲೆಗೆ ತೆರಳುವ ರಸ್ತೆ ಸಮಸ್ಯೆಯನ್ನು ಇತ್ಯರ್ಥಪಡಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಾಲೆಗೆ ಮಕ್ಕಳ ಕಳಿಸಲು ಪಾಲಕರ ಹಿಂದೇಟು:

ಶಾಲೆಯ ಚಾವಣಿಯ ಸಿಮೆಂಟ್ ಪದರು ಕುಸಿದು ವಿದ್ಯಾರ್ಥಿಗಳು ಗಾಯಗೊಂಡಿದ್ದರಿಂದ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ಹಿಂದೇಟು ಹಾಕಿದ್ದಾರೆ. 256 ವಿದ್ಯಾರ್ಥಿಗಳ ಪೈಕಿ 60 ವಿದ್ಯಾರ್ಥಿಗಳು ಮಾತ್ರ ಶನಿವಾರ ಶಾಲೆಗೆ ಹಾಜರಿದ್ದರು ಎನ್ನಲಾಗಿದೆ.

ಶಾಲೆಗೆ ಕಳಿಸಿದ್ರೆ ಮಕ್ಕಳನ್ನು ಎಲ್ಲಿ ಕೂಡಿಸ್ತಿರಿ?:

ಶಾಲೆಗೆ ಶನಿವಾರ ಭೇಟಿ ನೀಡಿದ ವಿದ್ಯಾರ್ಥಿಗಳ ಪಾಲಕರು ಮುಖ್ಯಶಿಕ್ಷಕರ ಜೊತೆಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದ್ರೆ ಕೂಡಿಸಲು ಸ್ಥಳವಿಲ್ಲ. ಈಗಾಗಲೇ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚಾವಣಿಯ ಸಿಮೆಂಟ್ ಬಿದ್ದ ಶಾಲೆಯಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ಮತ್ತೆ ಸ್ಥಳವೆಲ್ಲಿದೆ ? ಎಂದು ಪಾಲಕರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನವಾದರೆಡ್ಡಿ, ವೆಂಕಟರೆಡ್ಡಿ ಪೋತುಲ್, ಬಸಿರೆಡ್ಡಿ ಮುನಕನಪಲ್ಲಿ, ಶಿವಾರೆಡ್ಡಿ ಅಂಡೆಡಿ, ರಾಜಶೇಖರ ಗೌಡ , ವಿನೋದ ಕುಮಾರ, ನರಸರೆಡ್ಡಿ ಮುನಕನಪಲ್ಲಿ, ವೀರೇಶ ಸಜ್ಜನ, ಗುಂಡಪ್ಪ ಸಜ್ಜನ, ಭೀಮು ತಿಪಡಮಪಲ್ಲಿ, ವೆಂಕಟಪ್ಪ, ನರಸಿಂಹಲು ಕಾವಲಿ, ರಾಜು ಸಿದ್ದಾಪುರ, ಬಸವರಾಜ ಯಾದವ, ಕಾಶಪ್ಪ, ಶೇಖರ ಸೇರಿದಂತೆ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.