
ಕಲಬುರಗಿ: ಪಿಯುಸಿ ನಂತರ ಒಳ್ಳೆಯ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಂಬಲಿಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜನವರಿ 13ರಂದು ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳವನ್ನು ಹಮ್ಮಿಕೊಂಡಿದೆ.
ಜ. 13ರಂದು ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಶೈಕ್ಷಣಿಕ ಮೇಳಕ್ಕೆ ಉಚಿತ ಪ್ರವೇಶವಿದೆ. ಪಿಯುಸಿ ನಂತರ ತಾಂತ್ರಿಕ, ವೈದ್ಯಕೀಯ ಸೇರಿ ಯಾವ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು? ಸಿಇಟಿ, ನೀಟ್ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.
ಒಳ್ಳೆಯ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೊಡ್ಡ ಶಿಕ್ಷಣ ಮೇಳ ಇದಾಗಿದೆ. ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ? ಕೋರ್ಸ್ ಆಯ್ಕೆಯ ನಂತರ ಯಾವ ಕಾಲೇಜಿನಲ್ಲಿ ಓದುವುದು ಸೂಕ್ತ? ಕಾಲೇಜುಗಳಲ್ಲಿರುವ ಯಾವ ಯಾವ ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬಂತಹ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಮುಖ್ಯ ಅತಿಥಿಗಳು ಪ್ರೇರಣಾದಾಯಕ ಮಾತುಗಳನ್ನು ಆಡಲಿದ್ದಾರೆ. ತಜ್ಞ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ನವೋದಯ ವೈದ್ಯಕೀಯ ಕಾಲೇಜು, ಭೀಮಣ್ಣ ಖಂಡ್ರೆ ಎಂಜಿನಿಯರಿಂಗ್ ಕಾಲೇಜು ‘ಗೋಲ್ಡ್’ ಪ್ರಾಯೋಜಕತ್ವವನ್ನು ವಹಿಸಿಕೊಂಡಿವೆ. ಶಾಹೀನ್ ಶೈಕ್ಷಣಿಕ ಸಮೂಹಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಸಮತಾ ಲೋಕ ಶಿಕ್ಷಣ ಸಮಿತಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಎಸ್‌ಡಿಎಂ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜು, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ‘ಸಿಲ್ವರ್’ ಪ್ರಾಯೋಜಕತ್ವವನ್ನು ವಹಿಸಿಕೊಂಡಿವೆ.
ಮಾಹಿತಿಗೆ ಗುರುಪ್ರಕಾಶ್ ಮುಗಳಿ (ಮೊ: 9606912203), ಗಜೇಂದ್ರ ಮಟ್ಟಿ (ಮೊ: 9606912205), ದೇವೇಂದ್ರ (ಮೊ: 9606931791), ರಾಘವೇಂದ್ರ (ಮೊ: 9606912204) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.