ಕಲಬುರಗಿ: ಸಾರ್ವಜನಿಕರಿಗೆ ಕಾಲಮಿತಿಯಲ್ಲಿಯೇ ಸರ್ಕಾರಿ ಸೇವೆ ಒದಗಿಸುವ ‘ಸಕಾಲ’ ಯೋಜನೆಯಡಿ ಕಳೆದ ಆಗಸ್ಟ್ ತಿಂಗಳ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಗಳಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿಯೂ ಜಿಲ್ಲೆ ಸಕಾಲ ಸೇವೆಗಳ ವಿಲೇವಾರಿಯಲ್ಲಿ ಪ್ರಥಮ ಸ್ಥಾನದಲ್ಲೇ ಇತ್ತು.
ಆಗಸ್ಟ್ ತಿಂಗಳಲ್ಲಿ ಸಲ್ಲಿಕೆಯಾದ 1,17,044 ಅರ್ಜಿಗಳಲ್ಲಿ 1,16,567 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಮಾಸಾಂತ್ಯಕ್ಕೆ ಕೇವಲ 1407 ಅರ್ಜಿಗಳು ಮಾತ್ರ ಬಾಕಿ ಉಳಿದುಕೊಂಡಿವೆ. 1,15,160 ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲೇ ವಿಲೇವಾರಿ ಮಾಡಲಾಗಿದೆ. ಶೇ 98.79ರಷ್ಟು ಸಾಧನೆ ಮಾಡಿದಂತಾಗಿದೆ.
ಬೆಂಗಳೂರು, ಮೈಸೂರು, ಬೆಳಗಾವಿ ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಸ್ವೀಕೃತಗೊಂಡಿದ್ದು, ವಿಲೇವಾರಿಯಲ್ಲಿಯೂ ಕಲಬುರಗಿ ಜಿಲ್ಲೆ ಮುಂದಿದೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿ–ಸಿಬ್ಬಂದಿಗಳ ಪ್ರಯತ್ನದ ಫಲವಾಗಿ ಜಿಲ್ಲೆ ಇಂದು ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.