ಕಲಬುರಗಿ: ‘ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಬರೆದ ಸಾಹಿತ್ಯ ಅಜರಾಮರವಾಗಿರುತ್ತದೆ’ ಎಂದು ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಆಳಂದ ರಸ್ತೆಯ ಎಸ್.ಬಿ. ಕನ್ವೆನ್ಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ನಿವೃತ್ತ ಹೆಚ್ಚುವರಿ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ ಅಭಿನಂದನೆ ಹಾಗೂ ಸಹಕಾರಿ ಜ್ಯೋತಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಕಟ್ಟಿದ ಗುಡಿ–ಗುಂಡಾರಗಳು ಬಿದ್ದು ಹೋಗುತ್ತವೆ. ಆಳಿದ ರಾಜರು ಮಣ್ಣುಪಾಲು ಆಗಿರುತ್ತಾರೆ. ಆದರೆ ಮಾಡಿದ ಕಾರ್ಯಗಳು ಜತೆಗೆ ಬರೆದ ಸಾಹಿತ್ಯಕ್ಕೆ ಭವಿಷ್ಯವಿದೆಯಲ್ಲದೇ ಶಾಶ್ವತವಾಗಿರುತ್ತದೆ. ಬೆಣ್ಣೂರ ಸರ್ಕಾರಿ ಅಧಿಕಾರಿಯಾಗಿ ಎಲ್ಲರೊಂದಿಗೆ ಬೆರೆತು, ಸೌಜನ್ಯದೊಂದಿಗೆ ಮಾಡಿರುವ ದೊಡ್ಡ ಕಾರ್ಯಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ’ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಎಸ್.ಕೆ. ಕಾಂತಾ, ‘ಬೆಣ್ಣೂರ ಅವರ ಒಳ್ಳೆಯವರು ಎಂಬ ಹೆಸರು ಗಳಿಸಿದವರು. ಹೆಸರು ಕೆಡಿಸಿಕೊಂಡಿಲ್ಲ. ಸಾಕಷ್ಟು ರೈತರಿಗೆ ಸಹಾಯ ಮಾಡಿದ್ದಾರೆ’ ಎಂದರು.
ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯ ಹಾಗೂ ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ ಗೋನಾಯಕ ಮಾತನಾಡಿದರು.
ಹೆಚ್ಚುವರಿ ನಿಬಂಧಕರಾಗಿ ನಿವೃತ್ತಿ ಹೊಂದಿದ ಶರಣಬಸಪ್ಪ ಬೆಣ್ಣೂರ ದಂಪತಿ ಹಾಗೂ ಪತ್ರಕರ್ತ ಗುಂಡೂರಾವ ಕಡಣಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ, ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ, ಮುಖಂಡರಾದ ನೀಲಕಂಠರಾವ ಮೂಲಗೆ, ಶರಣಬಸಪ್ಪ ಪಾಟೀಲ ಅಷ್ಠಗಾ, ಚಂದ್ರಶೇಖರ ಬೆಣ್ಣೂರ, ಧೂಳಪ್ಪ ಬೆಣ್ಣೂರ, ವಿಶ್ವನಾಥ ಬೆಣ್ಣೂರ, ನವೀನ ಬೆಣ್ಣೂರ ಹಾಗೂ ಬೆಣ್ಣೂರ ಗೆಳೆಯರ ಬಳಗದ ಬಸವರಾಜ ವಾಲಿ, ಕೆ.ಎಸ್. ಮಾಲಿಪಾಟೀಲ, ಅರುಣಕುಮಾರ ಪಾಟೀಲ, ಸಂಗಮೇಶ ಹಿರೇಮಠ, ಗುರುಬಸಪ್ಪ ಪಾಟೀಲ, ಶ್ರೀಶೈಲ ಘೂಳಿ, ಚಂದ್ರಕಾಂತ ಬಿರಾದಾರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.